ಬೆಂಗಳೂರು: ಬೆಂಗಳೂರಿನ ಅತ್ಯಂತ ಜನದಟ್ಟಣೆಯ ಪ್ರದೇಶವಾದ ಹೆಬ್ಬಾಳ (Hebbal) ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಬಿಡಿಎ ನಿರ್ಮಿಸಿರುವ ಹೊಸ ಲೂಪ್ ಅನ್ನು ಪ್ರಾಯೋಗಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರಿಂದ ಯಲಹಂಕ ಹಾಗೂ ಜಕ್ಕೂರು ಭಾಗದಿಂದ ನಗರದೊಳಗೆ ಬರುವ ವಾಹನ ಸವಾರರಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.
ಹೆಬ್ಬಾಳದಿಂದ ಮೇನ್ರಿ ಸರ್ಕಲ್ (Mehkri Circle) ಕಡೆಗೆ ಸಾಗುವ ವಾಹನಗಳಿಗೆ ಈ ಹೊಸ ಲೂಪ್ ಅನುಕೂಲ ಮಾಡಿಕೊಡಲಿದೆ. ಇದರಿಂದ ಫ್ಲೈಓವರ್ ಮೇಲಿನ ಒತ್ತಡ ಕಡಿಮೆಯಾಗಲಿದೆ. ಯಲಹಂಕ ಮತ್ತು ಜಕ್ಕೂರು ಕಡೆಯಿಂದ ಬರುವ ವಾಹನಗಳಿಗೆ ಇದು ನೇರ ಸಂಪರ್ಕ ಕಲ್ಪಿಸಲಿದ್ದು, ಹೆಬ್ಬಾಳ ಫ್ಲೈಓವರ್ ಬಳಿ ಉಂಟಾಗುತ್ತಿದ್ದ ಸುಮಾರು ಶೇ. 25ರಷ್ಟು ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆಯಿದೆ.
ಸದ್ಯ ಬಿಡಿಎ ಈ ಲೂಪ್ ಅನ್ನು ಪ್ರಾಯೋಗಿಕ ಓಡಾಟಕ್ಕೆ (Trial Run) ಅನುವು ಮಾಡಿಕೊಟ್ಟಿದ್ದು, ವಾಹನ ಸವಾರರು ಇದರ ಲಾಭ ಪಡೆಯುತ್ತಿದ್ದಾರೆ.
ಹಲವು ತಿಂಗಳುಗಳಿಂದ ಕಾಮಗಾರಿ ನಡೆಯುತ್ತಿದ್ದ ಈ ಲೂಪ್ ಓಪನ್ ಆಗಿರುವುದು ಹೊಸ ವರ್ಷದ ಹೊಸ್ತಿಲಲ್ಲಿರುವ ಸವಾರರಿಗೆ ನೆಮ್ಮದಿ ತಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL) ಹೋಗುವ ಮತ್ತು ಬರುವ ವಾಹನಗಳಿಗೆ ಇದು ವೇಗವಾಗಿ ಸಾಗಲು ಸಹಾಯ ಮಾಡಲಿದೆ.






