ಕಾರವಾರ: ಕರಾವಳಿ ಉತ್ಸವ 2025ರ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು(ಬುಧವಾರ) ನಡೆಯಲಿರುವ ಕಾರ್ಯಕ್ರಮಗಳು ಜನಮನ ಸೆಳೆಯಲು ಸಜ್ಜಾಗಿವೆ. ಬೆಳಿಗ್ಗೆಯಿಂದಲೇ ವಿವಿಧ ಸ್ಪರ್ಧೆಗಳು ಮತ್ತು ಸಂಜೆ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಕಳೆಕಟ್ಟಲಿವೆ.
ಬೆಳಿಗ್ಗೆ 10 ಗಂಟೆಗೆ ಹೊಸ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದ ಆವರಣದಲ್ಲಿ ವರ್ಣರಂಜಿತ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಅದೇ ಸಮಯದಲ್ಲಿ, ಮಾಲಾದೇವಿ ಮೈದಾನದಲ್ಲಿ ರುಚಿಕಟ್ಟಾದ ಅಡುಗೆ ಸ್ಪರ್ಧೆಗಳು ಆರಂಭಗೊಳ್ಳಲಿದ್ದು, ಗೃಹಿಣಿಯರು ಮತ್ತು ಅಡುಗೆ ಪ್ರಿಯರಿಗೆ ತಮ್ಮ ಕೈಚಳಕ ತೋರಿಸಲು ವೇದಿಕೆ ಸಿದ್ಧವಾಗಿದೆ.
ಸಂಜೆ 5:30 ರಿಂದ ಮಯೂರವರ್ಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಎ2 ಮ್ಯೂಸಿಕ್ ಸ್ಟಾರ್ ತಂಡದಿಂದ ಸುಶ್ರಾವ್ಯ ಸಂಗೀತ ಕಾರ್ಯಕ್ರಮ, ನಾಟ್ಯಾರಂಭ ನೃತ್ಯ ಸಂಸ್ಥೆಯ ಅಭಿಷೇಕ್ ಜಿ. ನೇತ್ರೇಕರ ಹಾಗೂ ಕಲ್ಪನಾ ರಶ್ಮಿ ಕಲಾಲೋಕ ತಂಡದಿಂದ ನೃತ್ಯ ಪ್ರದರ್ಶನ, ಕುಮಾರ ಮಹಾತ್ಮ ಎಮ್. ಜೈನ್ ಅವರಿಂದ ಪೌರಾಣಿಕ ಕಥಾ ಹಂದರ ಹಾಗೂ ಚಿದಂಬರ್ ರಾಮಪ್ಪ ನಾಯ್ಕ ಅವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಭಾವೈಕ್ಯತೆ ಡೊಳ್ಳಿನ ಪದ ತಂಡದ ಇಮಾಮಸಾಬ್ ಎಂ. ವಲ್ಲಪ್ಪನವರ ಅವರಿಂದ ಡೊಳ್ಳಿನ ಪದಗಳ ಗಾಯನವಿರಲಿದೆ.

ಇಂದಿನ ಕಾರ್ಯಕ್ರಮದ ಹೈಲೈಟ್ ಎಂದರೆ ಭಾರತದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ (Sonu Nigam) ಅವರ ಲೈವ್ ಕಾನ್ಸರ್ಟ್. ರಾತ್ರಿ ನಡೆಯಲಿರುವ ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸೋನು ನಿಗಮ್ ತಮ್ಮ ಸುಮಧುರ ಕಂಠದ ಮೂಲಕ ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಯ ಹಾಡುಗಳನ್ನು ಹಾಡಿ ಕರಾವಳಿಯ ಜನತೆಯನ್ನು ರಂಜಿಸಲಿದ್ದಾರೆ.






