ಕಾರವಾರ: ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ-2025’ರ ವೇದಿಕೆಯಲ್ಲಿ ಮಂಗಳವಾರ ರಾತ್ರಿ ವಿಶಿಷ್ಟ ಕಾರ್ಯಕ್ರಮವೊಂದು ಪ್ರೇಕ್ಷಕರ ಮನಗೆದ್ದಿತು. ರಾಜಕೀಯ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್, ಗಾಯಕರಾಗಿ ಬದಲಾಗಿ ನೆರೆದಿದ್ದ ಸಾವಿರಾರು ಜನರ ಮನ ರಂಜಿಸಿದರು.
ಉತ್ಸವದ ಅಂಗವಾಗಿ ನಡೆದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ರಸಮಂಜರಿ ಕಾರ್ಯಕ್ರಮ ಜನಸಾಗರವನ್ನೇ ಸೆಳೆದಿತ್ತು. ಕಾರ್ಯಕ್ರಮದ ನಡುವೆ ಗಾಯಕ ಗುರುಕಿರಣ್ ಅವರು ಶಾಸಕ ಸತೀಶ್ ಸೈಲ್ ಅವರನ್ನು ವೇದಿಕೆಗೆ ಬರಮಾಡಿಕೊಂಡಿದ್ದು, ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡಿದ್ದಕ್ಕೆ ಶಾಸಕರಿಗೆ ಶುಭಾಶಯಗಳನ್ನು ಕೋರಿದರು. ಬಳಿಕ ಹಾಡು ಹಾಡುವಂತೆ ಪ್ರೀತಿಯಿಂದ ಆಹ್ವಾನಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಹಿಂಜರಿಯದೆ ಮೈಕ್ ಹಿಡಿದು ವೇದಿಕೆಯಲ್ಲಿ ಗಾಯಕಿಯೊಂದಿಗೆ ಹಾಡು ಹೇಳಿದರು.

ವರನಟ ಡಾ. ರಾಜ್‌ಕುಮಾರ ಅವರ ಕಟ್ಟಾ ಅಭಿಮಾನಿಯಾಗಿರುವ ಶಾಸಕ ಸತೀಶ್ ಸೈಲ್, ‘ಎರಡು ಕನಸು’ ಚಿತ್ರದ ಜನಪ್ರಿಯ ಗೀತೆ “ಎಂದೆಂದೂ ನಿನ್ನನು ಮರೆತು ಬದುಕಿರಲಾರೆ…” ಹಾಡನ್ನು ಹಾಡಿದರು. ಖ್ಯಾತ ಗಾಯಕಿ ಅನುರಾಧಾ ಭಟ್ ಅವರೊಂದಿಗೆ ದನಿಗೂಡಿಸಿದ ಶಾಸಕರು, ಸಾಮಾನ್ಯ ಗಾಯಕರಂತೆ ಸಂಪೂರ್ಣ ಹಾಡನ್ನು ಹೇಳಿ ಪೂರ್ಣಗೊಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು.
ಶಾಸಕರ ಗಾಯನ ಕೇಳಿ ರೋಮಾಂಚನಗೊಂಡ ಬೆಂಬಲಿಗರು ಮತ್ತು ಪ್ರೇಕ್ಷಕರು, ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಅವರನ್ನು ಹುರಿದುಂಬಿಸಿದರು. ಹಾಡಿನ ನಂತರ ಮಾತನಾಡಿದ ಶಾಸಕರು, ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.






