ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಪರಿಚಯವಾದ ಯುವಕನೊಬ್ಬ, ತನ್ನನ್ನು ಪ್ರೀತಿ ಮಾಡಲಿಲ್ಲ ಎಂಬ ದ್ವೇಷಕ್ಕೆ ಯುವತಿಯ ಮೇಲೆ ನಡುರಸ್ತೆಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿ ಬಟ್ಟೆ ಹರಿದಿರುವ ಅಮಾನವೀಯ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತ ಯುವತಿಗೆ 2024ರ ಸೆಪ್ಟೆಂಬರ್ 30 ರಂದು ಇನ್‌ಸ್ಟಾಗ್ರಾಮ್ ಮೂಲಕ ನವೀನ್ ಕುಮಾರ್ ಎಂಬಾತ ಪರಿಚಯವಾಗಿದ್ದ. ಮೊದಲು ಸ್ನೇಹದಿಂದಿದ್ದ ಇಬ್ಬರು ನಾಗರಭಾವಿ ಬಳಿ ಆಗಾಗ ಭೇಟಿಯಾಗುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ನವೀನ್ ಕುಮಾರ್ ಯುವತಿಗೆ “ನನ್ನನ್ನು ಪ್ರೀತಿ ಮಾಡಲೇಬೇಕು” ಎಂದು ಪೀಡಿಸಲು ಶುರುಮಾಡಿದ್ದ. ಇದಕ್ಕೆ ಯುವತಿ ನಿರಾಕರಿಸಿದಾಗ ಆಕೆಯ ಕೆಲಸದ ಸ್ಥಳ ಹಾಗೂ ವಾಸವಿದ್ದ ಪಿಜಿಗೂ (PG) ಬಂದು ಟಾರ್ಚರ್ ನೀಡುತ್ತಿದ್ದ.
ಡಿಸೆಂಬರ್ 22ರ ಮಧ್ಯಾಹ್ನ 3.20ಕ್ಕೆ ಉಲ್ಲಾಳ ಮುಖ್ಯರಸ್ತೆಯ ಜ್ಞಾನಜ್ಯೋತಿನಗರದ ಖಾಸಗಿ ಪಿಜಿ ಬಳಿ ಕಾರಿನಲ್ಲಿ ಬಂದ ನವೀನ್, ಯುವತಿಯನ್ನು ಅಡ್ಡಗಟ್ಟಿದ್ದಾನೆ. ಯುವತಿ ಕಿರುಚಾಡಿದರೂ ಬಿಡದ ಆತ, ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಆಕೆಯ ಬಟ್ಟೆಯನ್ನು ಹರಿದು ಅಟ್ಟಹಾಸ ಮೆರೆದಿದ್ದಾನೆ.
ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ಎಫ್‌ಐಆರ್ ದಾಖಲಾಗಿದೆ. ಆರೋಪಿ ನವೀನ್ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.






