ಬೆಂಗಳೂರು: ಪತಿಯಿಂದಲೇ ಪತ್ನಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಭೀಕರ ಘಟನೆ ಬೆಂಗಳೂರಿನ ಮಾಗಡಿ ರೋಡ್ (Magadi Road) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣವು ತೀವ್ರ ಸಂಚಲನ ಮೂಡಿಸಿದೆ.
ಭುವನೇಶ್ವರಿ ಎಂಬ ಮಹಿಳೆಯನ್ನು ಆಕೆಯ ಪತಿ ಬಾಲ ಮುರುಗನ್ (Bala Murugan) ಗುಂಡಿಟ್ಟು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪತಿ–ಪತ್ನಿಯ ನಡುವೆ ವೈವಾಹಿಕ ಕಲಹಗಳಿದ್ದು, ಪತ್ನಿ ನೀಡಿದ್ದ ಡೈವರ್ಸ್ ನೋಟಿಸ್‌ವೇ ಈ ಕೊಲೆ ಪ್ರಕರಣಕ್ಕೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಕೊಲೆಗೆ ನಿಖರ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಪ್ರಶ್ನೆ ಎಂದರೆ, ಪತ್ನಿ ಭುವನೇಶ್ವರಿ ಮೇಲೆ ಶೂಟೌಟ್ ಮಾಡಲು ಬಳಸಿದ ಪಿಸ್ತೂಲ್ ಆರೋಪಿಗೆ ಹೇಗೆ ಲಭ್ಯವಾಯಿತು? ಎಂಬುದಾಗಿದೆ. ಬಳಸಿದ ಪಿಸ್ತೂಲ್‌ಗೆ ಲೈಸೆನ್ಸ್ ಇತ್ತೇ? ಅಥವಾ ಅಕ್ರಮವಾಗಿ ಖರೀದಿ ಮಾಡಿ ಕೃತ್ಯಕ್ಕೆ ಬಳಸಲಾಗಿತ್ತೇ? ಎಂಬ ಅಂಶಗಳ ಕುರಿತಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ರಾತ್ರಿಯಿಂದಲೇ ಆರೋಪಿಯನ್ನು ಪೊಲೀಸ್ ಠಾಣೆಯಲ್ಲಿ ನಿರಂತರವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಸತ್ಯಾಂಶಗಳು ಹೊರಬರುವ ನಿರೀಕ್ಷೆಯಿದೆ.






