ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ಅಕ್ಟೋಬರ್‌ನಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಪ್ರೇಯಸಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನುವ ಕಾರಣಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆಯ ಹಿನ್ನೆಲೆ:
ಹತ್ಯೆಯಾದ ಯುವಕ ಅಥಣಿ ತಾಲೂಕಿನ ಮಹೇಶವಾಡಿ ಗ್ರಾಮದ ತುಕಾರಾಮ್ ಶಿಂಘೆ. ಈತ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಆರಿಸುವ ಕೆಲಸ ಮಾಡುತ್ತಿದ್ದ ಹಾಗೂ ಕೆಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಅಕ್ಟೋಬರ್ 22 ರಂದು ಆರೋಪಿ ಪ್ರದೀಪ್ ನಾಯಕ, ತುಕಾರಾಮ್‌ನನ್ನು ತನ್ನ ಪ್ರೇಯಸಿಯ (lover) ಮುಂದೆಯೇ ಬೆತ್ತಲೆಗೊಳಿಸಿ ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಆರಂಭದಲ್ಲಿ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಪೊಲೀಸರು ಆತನ ಕೈ ಮೇಲಿದ್ದ ಟ್ಯಾಟೋ (Tattoo) ಮತ್ತು ಫಿಂಗರ್ ಪ್ರಿಂಟ್ (Fingerprint) ಆಧರಿಸಿ ಮೃತನ ಗುರುತು ಪತ್ತೆ ಹಚ್ಚಿದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯ ಜೊತೆ ತುಕಾರಾಮ್ ಹೋಗುತ್ತಿರುವುದು ಸೆರೆಯಾಗಿತ್ತು.
ಬಂಧಿತ ಆರೋಪಿ ಚಿಕ್ಕೋಡಿ ಪಟ್ಟಣದ ನಿವಾಸಿ ಪ್ರದೀಪ್ ನಾಯಕ. ಈತನನ್ನು ಬಂಧಿಸಿದಾಗ ಪೊಲೀಸರಿಗೆ ಮತ್ತೊಂದು ಆಘಾತಕಾರಿ ವಿಷಯ ತಿಳಿದಿದೆ. ಈತ ಕೇವಲ ತುಕಾರಾಮ್ ಮಾತ್ರವಲ್ಲದೆ, ಈ ಹಿಂದೆ ಮತ್ತೊಂದು ಕೊಲೆ ಮಾಡಿದ್ದ ಡಬಲ್ ಮರ್ಡರ್ ಆರೋಪಿ ಎಂಬುದು ಬಯಲಾಗಿದೆ.






