ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ಪಟ್ಟಣದ ಪದ್ಮನಾಭ ನಗರದಲ್ಲಿ ಅತ್ಯಂತ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. 17 ವರ್ಷದ ಅಪ್ರಾಪ್ತ ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಆಕ್ರೋಶಕ್ಕೆ, ಆಕೆಗೆ ಹುಟ್ಟಿದ 40 ದಿನದ ಗಂಡು ಮಗುವನ್ನು ಅಜ್ಜಿಯೇ ಕೊಲೆ (Murder)ಮಾಡಿ ಹೂತುಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ಹಿನ್ನೆಲೆ:
ಚಿಂತಾಮಣಿ ಮೂಲದ ರಾಜೇಶ್ ಎಂಬುವವರನ್ನು 17 ವರ್ಷದ ಹಸೀಫಾ ಪ್ರೀತಿಸಿ ಮದುವೆಯಾಗಿದ್ದರು. ಕಳೆದ 40 ದಿನಗಳ ಹಿಂದೆ ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಹಸೀಫಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾದ ನಂತರ ಹಸೀಫಾ ತನ್ನ ತಾಯಿ ಮತ್ತು ಅಜ್ಜಿ ಮಹಬೂಬ್ ಬಿ ಅವರ ಬಳಿ ಮಗುವನ್ನು ಬಿಟ್ಟಿದ್ದರು.
ಅನ್ಯಧರ್ಮದ ಯುವಕನೊಂದಿಗೆ ಮದುವೆಯಾದ ವಿಚಾರಕ್ಕೆ ಅಜ್ಜಿ ಮಹಬೂಬ್ ಬಿ (Mahaboob Bi) ಕೋಪಗೊಂಡಿದ್ದರು ಎನ್ನಲಾಗಿದೆ. ಇದೇ ಸಿಟ್ಟಿನಲ್ಲಿ ಮಗುವನ್ನು ಕೊಂದು, ತಾಯಿಗೆ ತಿಳಿಯದಂತೆ ಗುಂಡಿಯಲ್ಲಿ ಹೂತುಹಾಕಿದ್ದಾರೆ ಎಂಬ ದೂರು ದಾಖಲಾಗಿದೆ
ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಮತ್ತು ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಗುಂಡಿಯಿಂದ ಮಗುವಿನ ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಮಗುವಿನ ತಾಯಿ (ಹಸೀಫಾ) ಅಪ್ರಾಪ್ತೆಯಾಗಿರುವ ಕಾರಣ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರದ ಬಾಲಕಿಯರ ಬಾಲಮಂದಿರಕ್ಕೆ ರವಾನಿಸಿದ್ದಾರೆ.
ಅಪ್ರಾಪ್ತೆಯನ್ನು ಮದುವೆಯಾದ ರಾಜೇಶ್ ಮೇಲೆ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಗುವನ್ನು ಕೊಲೆ ಮಾಡಿದ ಆರೋಪದಡಿ ಅಜ್ಜಿ ಮಹಬೂಬ್ ಬಿ ಮತ್ತು ಆಕೆಯ ಮಕ್ಕಳ ಮೇಲೆ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.






