ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತ ಮತ್ತು ಅಗ್ನಿ ಅವಘಡದ ಸುದ್ದಿಯ ನಡುವೆಯೇ ಒಂದು ನೆಮ್ಮದಿಯ ಸುದ್ದಿ ಹೊರಬಿದ್ದಿದೆ. ಅಪಘಾತಕ್ಕೀಡಾದ ಖಾಸಗಿ ಬಸ್‌ನ ಹಿಂದೆಯೇ ಬರುತ್ತಿದ್ದ ಶಾಲಾ ಬಸ್‌ನಲ್ಲಿದ್ದ ಬರೋಬ್ಬರಿ 60 ಮಕ್ಕಳು ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.
ಬೆಂಗಳೂರಿನ ಟಿ. ದಾಸರಹಳ್ಳಿಯ ಶಾಲೆಯೊಂದರ ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಎದುರಿನಿಂದ ಬಂದ ಕಂಟೈನರ್ ಲಾರಿ ಡಿವೈಡರ್ ಹಾರಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ದೃಶ್ಯವನ್ನು ಕಂಡ ಕೂಡಲೇ ಹಿಂದೆಯೇ ಬರುತ್ತಿದ್ದ ಶಾಲಾ ಬಸ್ ಚಾಲಕ, ಕ್ಷಣಾರ್ಧದಲ್ಲಿ ಬಸ್ಸನ್ನು ಎಡಭಾಗದ ಹಳ್ಳಕ್ಕೆ ಇಳಿಸಿ ಸರ್ವಿಸ್ ರಸ್ತೆಯತ್ತ ತಿರುಗಿಸಿದ್ದಾರೆ. ಚಾಲಕನ ತಕ್ಷಣದ ನಿರ್ಧಾರದಿಂದಾಗಿ ಬಸ್ ಡಿಕ್ಕಿಯಾಗುವುದು ತಪ್ಪಿದ್ದು, ಅದರಲ್ಲಿದ್ದ ಎಲ್ಲಾ 60 ಮಕ್ಕಳು ಸುರಕ್ಷಿತವಾಗಿದ್ದಾರೆ.
ಘಟನೆಯಲ್ಲಿ ಶಾಲಾ ಬಸ್ ಹಳ್ಳಕ್ಕೆ ಇಳಿದ ರಭಸಕ್ಕೆ ಅದರ ಮುಂಭಾಗದ ಗಾಜು ಒಡೆದಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಚ್ಚರಿಯ ವಿಷಯವೆಂದರೆ, ತಮಗೆ ಗಾಯವಾಗಿದ್ದರೂ ಲೆಕ್ಕಿಸದ ಶಾಲಾ ಬಸ್ ಚಾಲಕ, ತಕ್ಷಣ ಕೆಳಗಿಳಿದು ಹೊತ್ತಿ ಉರಿಯುತ್ತಿದ್ದ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ವಿವರಿಸಿದ ಚಾಲಕ, “ನಾವು ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಹೋಗುತ್ತಿದ್ದೆವು. ಎದುರಿನ ಲೇನ್‌ನಿಂದ ಲಾರಿ ಡಿವೈಡರ್ ದಾಟಿ ಬಂದು ಬಸ್‌ಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಡೀಸೆಲ್ ಟ್ಯಾಂಕ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿರಬಹುದು” ಎಂದು ತಿಳಿಸಿದ್ದಾರೆ. ಸಾವಿನ ದವಡೆಯಿಂದ ಮಕ್ಕಳನ್ನು ರಕ್ಷಿಸಿದ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.






