ಚಿತ್ರದುರ್ಗ: ಚಿತ್ರದುರ್ಗದ ಜವಗೊಂಡನಹಳ್ಳಿ ಬಳಿ ನಡೆದ ಭೀಕರ ಬಸ್ ಅವಘಡದಲ್ಲಿ ಶಿರಾಲಿ ಮೂಲದ ರಶ್ಮಿ ಮಹಾಲೆ ಅವರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ, ಅವರ ಕುಟುಂಬದಲ್ಲಿ ಆತಂಕದ ಮೌನ ಆವರಿಸಿದೆ. ರಶ್ಮಿ ಅವರು ಬೆಂಗಳೂರಿನ ಪ್ರಖ್ಯಾತ ಡೆಲಾಯ್ಟ್ (Deloitte) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಅಪಘಾತ ನಡೆದ ಸಮಯದಿಂದಲೂ ರಶ್ಮಿ ಅವರು ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದಾಗಿ ಶಿರಾಲಿಯ ಅವರ ಮನೆಯಲ್ಲಿ ಮೌನದ ಛಾಯೆ ಆವರಿಸಿದೆ.
ಮಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಸಿಗದ ಕಾರಣ, ರಶ್ಮಿ ಅವರ ತಂದೆ ದೇವಿದಾಸ್ ಮಹಾಲೆ ಅವರು ಚಿತ್ರದುರ್ಗಕ್ಕೆ ತೆರಳಿದ್ದಾರೆ. ರಶ್ಮಿ ತಾಯಿ ಸಾವಿತ್ರಿ ಅವರನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು, ಮನೆಗೆ ಬೀಗ ಹಾಕಿ ದೇವಿದಾಸ್ ಅವರು ಮಗಳ ಹುಡುಕಾಟಕ್ಕೆ ಹೊರಟಿದ್ದಾರೆ.
ರಶ್ಮಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಗೆಳತಿಯರಾದ ಗಗನಾ ಮತ್ತು ರಕ್ಷಿತಾ ಅವರು ಅಪಘಾತದ ವೇಳೆ ಬಸ್ಸಿನ ಕಿಟಕಿಯಿಂದ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬದುಕುಳಿದ ಗಗನಾ ಮತ್ತು ರಕ್ಷಿತಾ ಅವರ ಕುಟುಂಬಸ್ಥರು ರಶ್ಮಿ ಅವರ ಮನೆಯವರನ್ನು ಸಂಪರ್ಕಿಸಿದ್ದಾರೆ. ಆದರೆ, ರಶ್ಮಿ ಅವರು ಬಸ್ಸಿನಿಂದ ಹೊರಬಂದಿರುವ ಬಗ್ಗೆ ಗೆಳತಿಯರು ಯಾವುದೇ ಖಚಿತ ಮಾಹಿತಿ ನೀಡದಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.






