ಚನ್ನರಾಯಪಟ್ಟಣ: ಚಿತ್ರದುರ್ಗದ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದ ನಾಲ್ವರ ಪೈಕಿ ಒಬ್ಬರ ಗುರುತು ಪತ್ತೆಯಾಗಿದೆ. ಚನ್ನರಾಯಪಟ್ಟಣ ಮೂಲದ ಮಾನಸ ಎಂಬುವವರೇ ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.
ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದ ಕಾರಣ ಗುರುತು ಪತ್ತೆ ಮಾಡುವುದು ಕಷ್ಟವಾಗಿತ್ತು. ಈ ವೇಳೆ ಮಾನಸ ಅವರ ಕೊರಳಲ್ಲಿದ್ದ ಚಿನ್ನದ ಚೈನ್ (Gold Chain) ನೋಡಿ ತಂದೆ ಚಂದ್ರೇಗೌಡ ಅವರು ಮಗಳ ಗುರುತು ಪತ್ತೆ ಹಚ್ಚಿದ್ದಾರೆ.
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮಗಳ ದೇಹವನ್ನು ಕಂಡು ತಂದೆ ಚಂದ್ರೇಗೌಡ ಅವರು ಮರುಗಿದ್ದಾರೆ. ನನ್ನ ಮಗಳು ಶನಿವಾರ ಅಥವಾ ಭಾನುವಾರ ಊರಿಗೆ ಬರ್ತೀನಿ ಎಂದು ಹೇಳಿದ್ದಳು. ಬಂದ ಮೇಲೆ ಮದುವೆ ದಿನಾಂಕ (Marriage Date) ನಿಗದಿ ಮಾಡೋಣ ಎಂದು ತಿಳಿಸಿದ್ದಳು. ಆದರೆ ಈಗ ನನ್ನ ಮಗಳು ಗುರುತು ಸಿಗದ ರೀತಿಯಲ್ಲಿ ಕಣ್ಮರೆಯಾಗಿದ್ದಾಳೆ” ಎಂದು ಅವರು ತನ್ನ ನೋವನ್ನು ತೋಡಿಕೊಂಡಿದ್ದಾರೆ.






