ದಾವಣಗೆರೆ: ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ದುರಂತದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ಕಂಬನಿ ಮಿಡಿದಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘೋರ ದುರಂತ ಅತ್ಯಂತ ದುಃಖದ ಸಂಗತಿ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವು ನನಗೆ ಅರ್ಥವಾಗುತ್ತದೆ. ಆ ನೋವನ್ನು ಭರಿಸುವ ಶಕ್ತಿಯನ್ನು ದೇವರು ಸಂತ್ರಸ್ತ ಕುಟುಂಬಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸಿದರು.
ರಾತ್ರಿ ವೇಳೆ ಬಸ್ ಪ್ರಯಾಣವು ದಿನೇ ದಿನೇ ಅಸುರಕ್ಷಿತವಾಗುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ ಕುಮಾರಸ್ವಾಮಿ, ಇತ್ತೀಚೆಗೆ ರಾತ್ರಿ ವೇಳೆ ಸಂಭವಿಸುತ್ತಿರುವ ಅಪಘಾತಗಳು ಮತ್ತು ಸಾವು-ನೋವುಗಳ ಸಂಖ್ಯೆ ನಿರೀಕ್ಷೆ ಮೀರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಖಾಸಗಿ ಸ್ಲೀಪರ್ ಕೋಚ್ ಬಸ್‌ಗಳ ಸುರಕ್ಷತೆಯ ಬಗ್ಗೆ ತಕ್ಷಣವೇ ಗಮನಹರಿಸಬೇಕು. ಪ್ರಯಾಣಿಕರ ಸುರಕ್ಷತೆಗಾಗಿ ಪ್ರತ್ಯೇಕ ಮತ್ತು ಕಠಿಣ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸರ್ಕಾರವನ್ನು ಆಗ್ರಹಿಸಿದರು.
ವಿಶೇಷವಾಗಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಬೆಂಕಿ ಅವಘಡ ಅಥವಾ ಅಪಘಾತಗಳು ಸಂಭವಿಸಿದಾಗ, ಪ್ರಯಾಣಿಕರು ತುರ್ತಾಗಿ ಹೊರಬರಲು ಇರುವ ಮಾರ್ಗೋಪಾಯಗಳ ಬಗ್ಗೆ ಮರುಚಿಂತನೆ ನಡೆಸಬೇಕಿದೆ. ಈ ಕುರಿತು ಬಸ್ ಮಾಲೀಕರೊಂದಿಗೆ ಚರ್ಚಿಸಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಅವರು ಒತ್ತಾಯಿಸಿದರು.
ಶಾಮನೂರು ಸಮಾಧಿಗೆ ನಮನ: ಇದೇ ಸಂದರ್ಭದಲ್ಲಿ, ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಸ್ಥಳಕ್ಕೆ ತೆರಳಿ ಎಚ್.ಡಿ. ಕುಮಾರಸ್ವಾಮಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಶಾಮನೂರು ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.






