ಎಡ್ಮಂಟನ್ (ಕೆನಡಾ): ವೈದ್ಯಕೀಯ ಲೋಕದ ನಿರ್ಲಕ್ಷ್ಯವೋ ಅಥವಾ ವಿಧಿಯಾಟವೋ ಗೊತ್ತಿಲ್ಲ, ಆದರೆ ಕೆನಡಾದ ಎಡ್ಮಂಟನ್‌ನ ಆಸ್ಪತ್ರೆಯೊಂದರ ಎದುರು ಭಾರತೀಯ ಮೂಲದ 44 ವರ್ಷದ ವ್ಯಕ್ತಿಯೊಬ್ಬರು ಎದೆನೋವಿನಿಂದ ನರಳಿ, ಚಿಕಿತ್ಸೆ ಸಿಗದೆ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಮೂರು ಮಕ್ಕಳ ತಂದೆಯಾಗಿರುವ ಪ್ರಶಾಂತ್ ಶ್ರೀಕುಮಾರ್ ಅವರು ಸುಮಾರು 8 ಗಂಟೆಗಳ ಕಾಲ ಆಸ್ಪತ್ರೆಯ ಎಮರ್ಜೆನ್ಸಿ ರೂಮ್‌ನಲ್ಲಿ (Emergency Room) ಕಾದಿದ್ದರೂ, ವೈದ್ಯರು ಬರುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಲೆಕ್ಕಪರಿಶೋಧಕರಾಗಿ (Accountant) ಕೆಲಸ ಮಾಡುತ್ತಿದ್ದ ಪ್ರಶಾಂತ್ ಅವರಿಗೆ ಕೆಲಸದ ಸಮಯದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಗ್ರೇ ನನ್ಸ್ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿ ಅವರನ್ನು ತುರ್ತು ನಿಗಾ ಘಟಕದ ಹೊರಗೆ ಕಾಯುವಂತೆ ಸೂಚಿಸಿದ್ದಾರೆ. ತೀವ್ರವಾದ ನೋವು ಮತ್ತು ರಕ್ತದೊತ್ತಡ (BP) 210ಕ್ಕೆ ಏರಿದ್ದರೂ, ಆಸ್ಪತ್ರೆ ಸಿಬ್ಬಂದಿ ಕೇವಲ ಸಾಮಾನ್ಯ ನೋವು ನಿವಾರಕ (Tylenol) ಮಾತ್ರೆ ನೀಡಿ ಸುಮ್ಮನಾಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಶಾಂತ್ ಅವರ ತಂದೆ ಕುಮಾರ್ ಶ್ರೀಕುಮಾರ್ ಕಣ್ಣೀರು ಹಾಕುತ್ತಾ, “ನನ್ನ ಮಗ ಪದೇ ಪದೇ ‘ಪಪ್ಪಾ, ನನಗೆ ನೋವು ತಡೆಯಲಾಗುತ್ತಿಲ್ಲ’ ಎಂದು ಗೋಳಾಡುತ್ತಿದ್ದ. ವೈದ್ಯರಿಗೆ ಮತ್ತು ನರ್ಸ್‌ಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ. ಇಸಿಜಿ (ECG) ವರದಿ ಸಹಜವಾಗಿದೆ ಎಂದು ಹೇಳಿ ಕಾಯುವಂತೆ ಸೂಚಿಸಿದ ಸಿಬ್ಬಂದಿ, 8 ಗಂಟೆಗಳ ಬಳಿಕ ಚಿಕಿತ್ಸಾ ಕೊಠಡಿಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್, ಒಳಗೆ ಹೋದ ಕೆಲವೇ ಕ್ಷಣಗಳಲ್ಲಿ ಪ್ರಶಾಂತ್ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈ ಘಟನೆ ಕೆನಡಾದ ಆರೋಗ್ಯ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೃತ ಪ್ರಶಾಂತ್ ಪತ್ನಿ ಮತ್ತು 3, 10 ಹಾಗೂ 14 ವರ್ಷದ ಮೂವರು ಮಕ್ಕಳನ್ನು ಅಗಲಿದ್ದಾರೆ. ಇತ್ತ ಆಸ್ಪತ್ರೆ ನಡೆಸುತ್ತಿರುವ ‘ಕವೆನೆಂಟ್ ಹೆಲ್ತ್’ (Covenant Health) ಸಂಸ್ಥೆ, ಗೌಪ್ಯತೆಯ ಕಾರಣ ನೀಡಿ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದು, ಘಟನೆಯನ್ನು ವೈದ್ಯಕೀಯ ಪರೀಕ್ಷಕರ ಕಚೇರಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿ ಸಂತಾಪ ಸೂಚಿಸಿದೆ.






