ಬೆಂಗಳೂರು: ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ಅಪಘಾತದ ನಂತರ ರಾತ್ರಿ ವೇಳೆ ಖಾಸಗಿ ಬಸ್ ಸಂಚಾರದ ಮೇಲೆ ನಿಯಂತ್ರಣ ಹೇರುವ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ರಾತ್ರಿ 2 ಗಂಟೆಯ ನಂತರ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದರೆ ಅಪಘಾತಗಳನ್ನು ತಡೆಯಬಹುದು ಎಂಬ ಸಲಹೆಗಳು ಕೇಳಿಬರುತ್ತಿವೆ. ಈ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೂ ಕೂಡ ಚರ್ಚೆ ನಡೆಸಿದ್ದು, ಮಾರ್ಗಸೂಚಿ ತಯಾರಿಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಖಾಸಗಿ ಬಸ್ ಮಾಲೀಕರ ಆಕ್ರೋಶ
ಸರ್ಕಾರದ ಈ ಆಲೋಚನೆಗೆ ಖಾಸಗಿ ಬಸ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಪಘಾತಗಳಿಗೆ ಬಸ್‌ಗಳಿಗಿಂತ ಹೆಚ್ಚಾಗಿ ಲಾರಿ ಮತ್ತು ಟ್ರಕ್ ಚಾಲಕರ ನಿರ್ಲಕ್ಷ್ಯವೇ ಕಾರಣ ಎಂದು ಅವರು ದೂರಿದ್ದಾರೆ.
ಲಾರಿ ಚಾಲಕರು ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾರೆ ಮತ್ತು ಸೋಶಿಯಲ್ ಮೀಡಿಯಾ ಬಳಸುತ್ತಾರೆ, ಇದು ಅಪಘಾತಕ್ಕೆ ಪ್ರಮುಖ ಕಾರಣ . ಟ್ರಕ್ ಮತ್ತು ಲಾರಿಗಳಲ್ಲಿ ದೂರದ ಪ್ರಯಾಣಕ್ಕೂ ಒಬ್ಬರೇ ಚಾಲಕರಿರುತ್ತಾರೆ. ಮಾಲೀಕರ ಒತ್ತಡದಿಂದ ವಿಶ್ರಾಂತಿ ಇಲ್ಲದೆ ಕೆಲಸ ಮಾಡುವ ಇವರು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಖಾಸಗಿ ಬಸ್‌ಗಳಲ್ಲಿ ಇಬ್ಬರು ಚಾಲಕರಿರುತ್ತಾರೆ ಮತ್ತು ಅವರಿಗೆ ಹಗಲಿನಲ್ಲಿ ವಿಶ್ರಾಂತಿ ನೀಡಲಾಗುತ್ತದೆ ಎಂದು ಬಸ್ ಮಾಲೀಕರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ (KSBOA) ಅಧ್ಯಕ್ಷ ಎಸ್. ನಟರಾಜ ಶರ್ಮ ಅವರು ಈ ಕುರಿತು ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ರಾತ್ರಿ 2 ಗಂಟೆಯ ಬಳಿಕ ಬಸ್ ಸಂಚಾರ ನಿಲ್ಲಿಸುವ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು. ಬಸ್‌ಗಳ ಬದಲು ಭಾರಿ ಸರಕು ವಾಹನಗಳ (Trucks/Lorries) ಮೇಲೆ ರಾತ್ರಿ ವೇಳೆ ನಿರ್ಬಂಧ ಹೇರಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ.
ಹಾಗೂ ಬಸ್ ಸಂಚಾರ ನಿರ್ಬಂಧಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗುವುದಲ್ಲದೆ ಪ್ರವಾಸೋದ್ಯಮ ಮತ್ತು ಉದ್ಯೋಗದ ಮೇಲೂ ದೊಡ್ಡ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದ್ದಾರೆ.






