ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್-1 ರಲ್ಲಿನ ವಾಣಿಜ್ಯ ವಾಹನಗಳ ಪಿಕ್‌ಅಪ್ ನಿಯಮಗಳಲ್ಲಿ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮಹತ್ವದ ಬದಲಾವಣೆ ಮಾಡಿದೆ. ವಾಹನಗಳ ಪಿಕ್‌ಅಪ್ ಪ್ರದೇಶಗಳಲ್ಲಿ ನೀಡಲಾಗುತ್ತಿದ್ದ ಉಚಿತ ಪಾರ್ಕಿಂಗ್ ಅವಧಿಯನ್ನು ಇಂದಿನಿಂದಲೇ (ಡಿಸೆಂಬರ್ 26) ಜಾರಿಗೆ ಬರುವಂತೆ 15 ನಿಮಿಷಗಳಿಗೆ ಹೆಚ್ಚಿಸಲಾಗಿದೆ.
ಡಿಸೆಂಬರ್ 13 ರಂದು ಜಾರಿಗೆ ತರಲಾಗಿದ್ದ ಹೊಸ ನಿಯಮದ ಅನ್ವಯ, ಟರ್ಮಿನಲ್-1 ಕ್ಕೆ ಆಗಮಿಸುವ ವಾಣಿಜ್ಯ ವಾಹನಗಳು (ಕ್ಯಾಬ್‌ಗಳು) ನಿಗದಿಪಡಿಸಿದ P3 ಮತ್ತು P4 ಪಾರ್ಕಿಂಗ್ ವಲಯಗಳಲ್ಲಿ ಕಾಯಬೇಕಿತ್ತು. ಅಲ್ಲಿ ಕೇವಲ 10 ನಿಮಿಷಗಳ ಉಚಿತ ಪಾರ್ಕಿಂಗ್‌ಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಪ್ರಯಾಣಿಕರು ಮತ್ತು ಚಾಲಕರ ಅನುಕೂಲಕ್ಕಾಗಿ ಈ ಉಚಿತ ಕಾಯುವಿಕೆ ಅವಧಿಯನ್ನು (Free Wait Time) 15 ನಿಮಿಷಗಳಿಗೆ ವಿಸ್ತರಿಸಲಾಗಿದೆ.
ಶುಲ್ಕದ ವಿವರ: ಪರಿಷ್ಕೃತ ನಿಯಮದ ಪ್ರಕಾರ, 15 ನಿಮಿಷಗಳ ಉಚಿತ ಅವಧಿ ಮುಗಿದ ನಂತರ, ಮುಂದಿನ ಅರ್ಧ ಗಂಟೆಯ (30 ನಿಮಿಷ) ಸ್ಲಾಟ್‌ಗೆ ಚಾಲಕರು 100 ರೂ. ಪಾವತಿಸಬೇಕಾಗುತ್ತದೆ. ಆ ಬಳಿಕದ ಪ್ರತಿ ಹೆಚ್ಚುವರಿ ಗಂಟೆಗೆ 50 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ.
ಟರ್ಮಿನಲ್-1 ಮತ್ತು ಪಾರ್ಕಿಂಗ್ ಪ್ರದೇಶಗಳ ನಡುವೆ ಸಂಚರಿಸಲು ಶಟಲ್ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ 7 ನಿಮಿಷಕ್ಕೊಮ್ಮೆ ಈ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಜೊತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಗ್ಗಿಗಳು ಮತ್ತು ಕಾರ್‌ಗಳ ಸೇವೆಯೂ ಲಭ್ಯವಿರಲಿದೆ ಎಂದು ಬಿಐಎಎಲ್ ತಿಳಿಸಿದೆ.






