ಅಹಮದಾಬಾದ್: ವಿದೇಶದಲ್ಲಿ ನೆಮ್ಮದಿಯ ಕೆಲಸ, ಕೈತುಂಬಾ ಸಂಬಳ ಎಂಬ ಕನಸು ಕಂಡು ವಿಮಾನ ಹತ್ತಿದ್ದ ನೂರಕ್ಕೂ ಹೆಚ್ಚು ಗುಜರಾತಿ ಯುವಕರ ಬದುಕು ಈಗ ಮ್ಯಾನ್ಮಾರ್‌ನಲ್ಲಿ (Myanmar) ನರಕಸದೃಶವಾಗಿದೆ. ಅಂತಾರಾಷ್ಟ್ರೀಯ ಸೈಬರ್ ವಂಚನೆಯ ಜಾಲಕ್ಕೆ ಬಲಿಯಾಗಿರುವ ಈ ಯುವಕರು, ಇದೀಗ ಪ್ರಾಣಭಯದಲ್ಲಿ ಭಾರತ ಸರ್ಕಾರದ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ವಡೋದರಾ ಜಿಲ್ಲೆಯ ಸಾವ್ಲಿ ಮತ್ತು ದೇಸಾರ್ ತಾಲೂಕಿನ ಅನೇಕ ಯುವಕರಿಗೆ ಡೇಟಾ ಎಂಟ್ರಿ (Data Entry Jobs) ಕೆಲಸದ ಆಮಿಷವೊಡ್ಡಿ ಏಜೆಂಟರು ವಂಚಿಸಿದ್ದಾರೆ. ಆದರೆ ಮ್ಯಾನ್ಮಾರ್‌ಗೆ ಕಾಲಿಡುತ್ತಿದ್ದಂತೆಯೇ ಪರಿಸ್ಥಿತಿ ಬದಲಾಗಿದೆ. ಉದ್ಯೋಗದ ಬದಲಿಗೆ, ಅವರನ್ನು ಒತ್ತೆಯಾಳುಗಳಂತೆ ಇರಿಸಿಕೊಂಡು, ಬಲವಂತವಾಗಿ ಸೈಬರ್ ಕ್ರೈಮ್ (Cybercrime) ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ದಿನಕ್ಕೆ 18 ಗಂಟೆ ಕೆಲಸ, ಪ್ರತಿರೋಧಿಸಿದರೆ ಹಲ್ಲೆ!
ಸಂತ್ರಸ್ತ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ನಮಗೆ ದಿನಕ್ಕೆ 14 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುವಂತೆ ಹಿಂಸಿಸಲಾಗುತ್ತಿದೆ. ವಿರೋಧಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ. ಅಹಮದಾಬಾದ್ ಕ್ರೈಂ ಬ್ರಾಂಚ್ ಇತ್ತೀಚೆಗೆ ಮ್ಯಾನ್ಮಾರ್ ಮೂಲದ ಸೈಬರ್ ರಾಕೆಟ್ ಒಂದನ್ನು ಭೇದಿಸಿದ ಸುದ್ದಿ ತಿಳಿದ ತಕ್ಷಣ, ತಾವು ಕೂಡ ಅದೇ ಜಾಲದಲ್ಲಿ ಸಿಲುಕಿದ್ದೇವೆ ಎಂದು ಅರಿತು ಯುವಕರು ಕಂಪನಿಯಿಂದ ತಪ್ಪಿಸಿಕೊಂಡು ಓಡಿಬಂದಿದ್ದಾರೆ.
ಕಳೆದ 20 ದಿನಗಳಿಂದ ಈ ಯುವಕರು ಮ್ಯಾನ್ಮಾರ್‌ನ ಮಾಯಾ ವಾಡಿ ಪ್ರದೇಶದ ಎನ್‌ಜಿಒ ಒಂದರ ‘ಸೇಫ್ ಹೌಸ್’ನಲ್ಲಿ ತಲೆಮರೆಸಿಕೊಂಡಿದ್ದಾರೆ. “ನಮ್ಮ ಬಳಿ ಹಣವಿಲ್ಲ, ಫೋನ್ ಬ್ಯಾಟರಿಗಳು ಸಾಯುತ್ತಿವೆ, ನಮಗೆ ಬೇರೆ ದಾರಿಯೇ ಕಾಣುತ್ತಿಲ್ಲ,” ಎಂದು ಕುಂಜನ್ ಶಾ ಎಂಬ ಯುವಕ ಕಣ್ಣೀರು ಹಾಕಿದ್ದಾರೆ. ಇಮಿಗ್ರೇಷನ್ ಸಮಸ್ಯೆಯನ್ನು ಬಗೆಹರಿಸಲಾಗಿದ್ದರೂ, ಭಾರತೀಯ ಅಧಿಕಾರಿಗಳಿಂದ ಇನ್ನೂ ಸೂಕ್ತ ಸಹಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿ ಮೋದಿಗೆ ಪತ್ರ: ಇತ್ತ ಗುಜರಾತ್‌ನಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಕುಂಜನ್ ಶಾ ಅವರ ಪೋಷಕರಾದ ಜಯೇಶ್ ಭಾಯ್ ಮತ್ತು ಹಂಸಾಬೆನ್, “ನಮಗೆ ಹಣ ಬೇಡ, ನಮ್ಮ ಮಗ ಸುರಕ್ಷಿತವಾಗಿ ಬಂದರೆ ಸಾಕು” ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಈ ಮಧ್ಯೆ, ಸಾವ್ಲಿ ಶಾಸಕ ಕೇತನ್ ಇನಾಂದಾರ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ತುರ್ತು ಪತ್ರ ಬರೆದಿದ್ದು, ನೂರಕ್ಕೂ ಹೆಚ್ಚು ಭಾರತೀಯ ಯುವಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿದೇಶಾಂಗ ಸಚಿವಾಲಯ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.






