ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ–69ರಲ್ಲಿ (National Highway-69) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೃತಪಟ್ಟವರೆಲ್ಲರೂ ಅಜ್ಜವಾರ ಗ್ರಾಮದವರಾದ ಅರುಣ್ (18), ನಂದೀಶ್ (19), ನರಸಿಂಹ (22), ಮನೋಜ್ (23) ಎಂದು ಗುರುತಿಸಲಾಗಿದೆ.
ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಗೆ ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ (Tipper lorry) ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಚರ್ಚ್‌ಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಮೃತರಲ್ಲಿ ನರಸಿಂಹಮೂರ್ತಿ ಹಾಗೂ ನಂದೀಶ್ ಒಂದೇ ಕುಟುಂಬದ ಅಣ್ಣ–ತಮ್ಮಂದಿರು ಆಗಿದ್ದಾರೆ. ನರಸಿಂಹಮೂರ್ತಿಗೆ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು, ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕರಲ್ಲಿ ಇಬ್ಬರು ಡೆಕೋರೇಷನ್ ಕೆಲಸ, ಒಬ್ಬ ಡಿಮಾರ್ಟ್, ಮತ್ತೊಬ್ಬ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಂತರ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ (SP Kushal Chouksey) ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಟಿಪ್ಪರ್ ಲಾರಿಯ ಲೈಟ್ ಫೋಕಸ್ ಸಮಸ್ಯೆಯಿಂದ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇತ್ತ, ಮೃತದೇಹಗಳನ್ನು ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಬಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.






