ಟೊರೊಂಟೊ: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಟೊರೊಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ 20 ವರ್ಷದ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿಯೊಬ್ಬರನ್ನು ಗುಂಡಿಕ್ಕಿ ಹ*ತ್ಯೆ ಮಾಡಲಾಗಿದೆ.
ಮೃತರನ್ನು ಶಿವಂಕ್ ಅವಸ್ತಿ ಎಂದು ಗುರುತಿಸಲಾಗಿದೆ. ಟೊರೊಂಟೊ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಹೈಲ್ಯಾಂಡ್ ಕ್ರೀಕ್ ಟ್ರಯಲ್ ಮತ್ತು ಓಲ್ಡ್ ಕಿಂಗ್‌ಸ್ಟನ್ ರಸ್ತೆ ಬಳಿ ಗಾಯಗೊಂಡ ವ್ಯಕ್ತಿಯೊಬ್ಬರು ಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿವಂಕ್ ಸ್ಥಳದಲ್ಲೇ ಮೃ*ತಪಟ್ಟಿರುವುದು ದೃಢಪಟ್ಟಿದೆ.
ಶಂಕಿತ ಆರೋಪಿ ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಪರಾರಿಯಾಗಿದ್ದು, ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಘಟನೆಯನ್ನು ಪೊಲೀಸರು ‘ನರಹ*ತ್ಯೆ’ (Homicide) ಎಂದು ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಸಾಕ್ಷ್ಯಗಳ ಸಂಗ್ರಹ ಮತ್ತು ಘಟನೆಯ ನಿಖರ ಕಾರಣ ತಿಳಿಯಲು ತನಿಖಾ ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದು ಇನ್ಸ್‌ಪೆಕ್ಟರ್ ಜೆಫ್ ಆಲಿಂಗ್ಟನ್ ತಿಳಿಸಿದ್ದಾರೆ.
ವಿವಿ ಚೀರ್‌ಲೀಡಿಂಗ್ ತಂಡದ ಸದಸ್ಯನಾಗಿದ್ದ ಶಿವಂಕ್: ಶಿವಂಕ್ ಅವಸ್ತಿ ಅವರು ಯುಟಿಎಸ್‌ಸಿ (UTSC) ಚೀರ್‌ಲೀಡಿಂಗ್ ತಂಡದ ಸಕ್ರಿಯ ಸದಸ್ಯರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ತಂಡವು ಇನ್‌ಸ್ಟಾಗ್ರಾಮ್ ಮೂಲಕ ಕಂಬನಿ ಮಿಡಿದಿದೆ. “ನಮ್ಮ ತಂಡದ ಪ್ರೀತಿಯ ಸದಸ್ಯ ಶಿವಂಕ್ ಅವರನ್ನು ಕಳೆದುಕೊಂಡಿರುವುದು ತೀವ್ರ ಆಘಾತ ತಂದಿದೆ. ಅವರು ಯಾವಾಗಲೂ ನಗುತ್ತಾ, ತಂಡದಲ್ಲಿ ಉತ್ಸಾಹ ತುಂಬುತ್ತಿದ್ದರು” ಎಂದು ಸ್ಮರಿಸಿದೆ.
ಭಾರತೀಯ ದೂತಾವಾಸದ ಪ್ರತಿಕ್ರಿಯೆ: ಈ ದುರಂತಕ್ಕೆ ಟೊರೊಂಟೊದಲ್ಲಿರುವ ಭಾರತೀಯ ದೂತಾವಾಸವು ತೀವ್ರ ಕಳವಳ ವ್ಯಕ್ತಪಡಿಸಿದೆ. “ಯುವ ವಿದ್ಯಾರ್ಥಿಯ ಸಾವು ನಮಗೆ ಆಘಾತ ತಂದಿದೆ. ನಾವು ಮೃತರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುತ್ತಿದ್ದೇವೆ” ಎಂದು ದೂತಾವಾಸವು ‘ಎಕ್ಸ್‘ (ಟ್ವಿಟರ್) ಖಾತೆಯಲ್ಲಿ ತಿಳಿಸಿದೆ.
ವಿಶ್ವವಿದ್ಯಾಲಯವು ಕೂಡ ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಕ್ಯಾಂಪಸ್ ಸುರಕ್ಷತಾ ಎಚ್ಚರಿಕೆಯನ್ನು (Safety Alert) ಘೋಷಿಸಿದೆ. ಪೊಲೀಸರ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೈಲ್ಯಾಂಡ್ ಕ್ರೀಕ್ ವ್ಯಾಲಿ ಪ್ರದೇಶಕ್ಕೆ ಹೋಗದಂತೆ ಸೂಚಿಸಲಾಗಿದೆ.
ಮತ್ತೊಂದು ಕೊಲೆ ಪ್ರಕರಣ: ಇದು ಈ ವರ್ಷ ಟೊರೊಂಟೊ ನಗರದಲ್ಲಿ ನಡೆದ 41ನೇ ಕೊ*ಲೆ ಪ್ರಕರಣವಾಗಿದೆ. ಇದೇ ವಾರದಲ್ಲಿ ಟೊರೊಂಟೊದಲ್ಲಿ ಮತ್ತೋರ್ವ ಭಾರತೀಯ ಮೂಲದ ಮಹಿಳೆ ಹಿಮಾಂಶಿ ಖುರಾನಾ (30) ಅವರ ಹ*ತ್ಯೆಯಾಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಗಫೂರಿ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.






