ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಮುಖ ಆಭರಣ ಮಳಿಗೆಯಾದ ಕಲ್ಯಾಣ್ ಜ್ಯುವೆಲ್ಲರ್ಸ್ (Kalyan Jewellers), ಗ್ರಾಹಕರಿಗೆ ಹಿಂದಿ ಭಾಷೆಯ ಕ್ಯಾಲೆಂಡರ್‌ಗಳನ್ನು ವಿತರಿಸುತ್ತಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ವ್ಯವಹರಿಸುವಾಗ ಕನ್ನಡ ಭಾಷೆಯನ್ನು ಕಡೆಗಣಿಸಿ, ಹಿಂದಿ ಭಾಷೆಯ ಕ್ಯಾಲೆಂಡರ್ ಹಂಚುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಬೆಂಗಳೂರಿನಲ್ಲಿ ವ್ಯವಹಾರ ನಡೆಸುವ ನಿಮಗೆ ಕನಿಷ್ಠ ಜ್ಞಾನವಿಲ್ಲವೇ? ಇಲ್ಲಿ ಹಿಂದಿ ಕ್ಯಾಲೆಂಡರ್ ಯಾಕೆ ಹಂಚುತ್ತಿದ್ದೀರಿ? ನಿಮಗೇನು ಸೊಕ್ಕೇ?” ಎಂದು ನೆಟ್ಟಿಗರು ಆಕ್ರೋಶಗೊಂಡು ಪ್ರಶ್ನಿಸಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಅದನ್ನು ಬಿಟ್ಟು ಪರಭಾಷೆಯ ಹೇರಿಕೆ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ತಕ್ಷಣವೇ ಈ ಹಿಂದಿ ಕ್ಯಾಲೆಂಡರ್‌ಗಳನ್ನು ಹಿಂಪಡೆಯಬೇಕು ಮತ್ತು ಕನ್ನಡ ಭಾಷೆಯಲ್ಲಿ ಕ್ಯಾಲೆಂಡರ್ ಮುದ್ರಿಸಿ, ಅದರಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ (Shivanna) ಅವರ ಭಾವಚಿತ್ರವನ್ನು ಹಾಕಿ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸಕ್ಕೆ ಕೈಹಾಕಬೇಡಿ ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (ಟ್ವಿಟರ್) ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.






