ಭಟ್ಕಳ(ಉತ್ತರಕನ್ನಡ): ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ನಡೆದ ಖಾಸಗಿ ಬಸ್ ಮತ್ತು ಲಾರಿ ನಡುವಿನ ಭೀಕರ ರಸ್ತೆ ಅಪಘಾತ ಹಾಗೂ ಅಗ್ನಿ ದುರಂತದಲ್ಲಿ ಅಕಾಲಿಕವಾಗಿ ಮೃತಪಟ್ಟ ಭಟ್ಕಳದ ಪ್ರತಿಭಾನ್ವಿತ ಯುವತಿ ರಶ್ಮಿ ಮಹಾಲೆ ಅವರ ನಿವಾಸಕ್ಕೆ ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು.
ಮಗಳ ಅಗಲಿಕೆಯ ನೋವಿನಲ್ಲಿದ್ದ ರಶ್ಮಿ ಅವರ ಪೋಷಕರು ಹಾಗೂ ಕುಟುಂಬಸ್ಥರಿಗೆ ಸಂಸದರು ಸಾಂತ್ವನ ಹೇಳಿದರು. ಬದುಕಿ ಬಾಳಬೇಕಾಗಿದ್ದ, ಉಜ್ವಲ ಭವಿಷ್ಯವನ್ನು ಹೊಂದಿದ್ದ ಮನೆಯ ಮಗಳು ಇಂತಹ ಭೀಕರ ದುರಂತಕ್ಕೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ, ಎಂದು ಕಾಗೇರಿ ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು. ಮೃತ ಯುವತಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ ಅವರು, ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ ಎಂದು ಹಾರೈಸಿದರು.
ಪ್ರಧಾನಿ ಪರಿಹಾರಕ್ಕೆ ಕೃತಜ್ಞತೆ: ಈ ಭೀಕರ ದುರಂತಕ್ಕೆ ತಕ್ಷಣವೇ ಸ್ಪಂದಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಪರಿಹಾರ ಘೋಷಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ತ್ವರಿತವಾಗಿ ಸ್ಪಂದಿಸಿದ ಪ್ರಧಾನಿಯವರಿಗೆ ಸಂಸದ ಕಾಗೇರಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಭಟ್ಕಳದ ಮಾಜಿ ಶಾಸಕರಾದ ಸುನಿಲ್ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಎಸ್.ಹೆಗಡೆ, ಪ್ರಮುಖರಾದ ಗೋವಿಂದ ನಾಯಕ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.






