ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ರಾತ್ರಿ ಭೀಕರ ಅವಘಡವೊಂದು ಸಂಭವಿಸಿದೆ. ಕ್ರಿಸ್‌ಮಸ್ ಸಂಭ್ರಮ ಹಾಗೂ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಸಾಗರವೇ ಹರಿದುಬಂದಿದ್ದ ವೇಳೆ, ಬಲೂನ್ ತುಂಬಲು ಬಳಸುತ್ತಿದ್ದ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು (Cylinder Blast), ಬಲೂನ್ ವ್ಯಾಪಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಪ್ರವಾಸಿಗರು ಗಾಯಗೊಂಡಿದ್ದಾರೆ.
ರಾತ್ರಿ 8.30ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಆ ಸಮಯದಲ್ಲಿ ಅರಮನೆ ಆವರಣದಲ್ಲಿ ಸಾವಿರಾರು ಪ್ರವಾಸಿಗರು ನೆರೆದಿದ್ದರು. ಈ ಘಟನಾ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಖ್ಯಾತ ಗಾಯಕ ವಾಸುಕಿ ವೈಭವ್ (Vasuki Vaibhav) ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಸ್ಫೋಟದ ತೀವ್ರ ಶಬ್ದಕ್ಕೆ ಬೆಚ್ಚಿಬಿದ್ದ ಜನ ದಿಕ್ಕಾಪಾಲಾಗಿ ಓಡಿದ್ದರಿಂದ, ಸ್ಥಳದಲ್ಲಿ ಕೆಲಕಾಲ ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
ಸ್ಫೋಟದಲ್ಲಿ ಮೃತಪಟ್ಟ ಬಲೂನ್ ವ್ಯಾಪಾರಿಯ ವಯಸ್ಸು ಸುಮಾರು 40 ವರ್ಷ ಎಂದು ಅಂದಾಜಿಸಲಾಗಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆಯಲ್ಲಿ ದಾರಿಹೋಕರಾಗಿದ್ದ ಬೆಂಗಳೂರಿನ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕೋಲ್ಕತ್ತಾದ ಶಹೀನಾ ಶಬೀರ್ ಮತ್ತು ರಾಣೇಬೆನ್ನೂರಿನ ಕೊಟ್ರೇಶ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕೆ.ಆರ್. ಆಸ್ಪತ್ರೆ ಮತ್ತು ಜೆಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ (Seema Latkar) ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡ, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಆಗಮಿಸಿ ಪರಿಶೀಲನೆ ನಡೆಸಿವೆ. ಜನನಿಬಿಡ ಪ್ರದೇಶಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಸಿಲಿಂಡರ್ ಬಳಕೆ ಮಾಡುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






