ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧಾರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಸಿನಿಮಾ ‘ಧುರಂಧರ್‘ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಡಿಸೆಂಬರ್ 5 ರಂದು ಹೆಚ್ಚು ಪ್ರಚಾರವಿಲ್ಲದೆ ತೆರೆಕಂಡ ಈ ಚಿತ್ರ, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಿಡುಗಡೆಯಾದ ಕೇವಲ 21 ದಿನಗಳಲ್ಲಿ ವಿಶ್ವಾದ್ಯಂತ 1000 ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.
1000 ಕೋಟಿ ಕ್ಲಬ್ ಸೇರಿದ 9ನೇ ಚಿತ್ರ:
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 1000 ಕೋಟಿ ಕ್ಲಬ್ ಸೇರಿದ 9ನೇ ಚಿತ್ರ ಎಂಬ ಹೆಗ್ಗಳಿಕೆಗೆ ‘ಧುರಂಧರ್‘ ಪಾತ್ರವಾಗಿದೆ. 2017ರಲ್ಲಿ ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಈ ಮೈಲಿಗಲ್ಲನ್ನು ತಲುಪಿದ ಮೊದಲ ಚಿತ್ರವಾಗಿತ್ತು. ಆ ನಂತರ ಅಮೀರ್ ಖಾನ್ ಅವರ ‘ದಂಗಲ್‘ ಚೀನಾದಲ್ಲಿ ಬಿಡುಗಡೆಯಾಗಿ 2000 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು, ಇಂದಿಗೂ ಅಗ್ರಸ್ಥಾನದಲ್ಲಿದೆ. ನಂತರದ ವರ್ಷಗಳಲ್ಲಿ ‘ಆರ್‌ಆರ್‌ಆರ್’, ಪ್ರಶಾಂತ್ ನೀಲ್ ಅವರ ‘ಕೆಜಿಎಫ್ ಚಾಪ್ಟರ್ 2′, ಶಾರುಖ್ ಖಾನ್ ಅವರ ‘ಜವಾನ್‘ ಹಾಗೂ ‘ಪಠಾಣ್‘, ಪ್ರಭಾಸ್ ನಟನೆಯ ‘ಕಲ್ಕಿ 2898 AD’ ಮತ್ತು ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಈ ಪಟ್ಟಿಗೆ ಸೇರ್ಪಡೆಯಾಗಿದ್ದವು.
ಅತಿ ಹೆಚ್ಚು ಗಳಿಕೆ ಕಂಡ ಟಾಪ್ ಸಿನಿಮಾಗಳ ಪಟ್ಟಿ:
- ದಂಗಲ್: ₹2070 ಕೋಟಿ
- ಪುಷ್ಪ 2 – ದಿ ರೂಲ್: ₹1871 ಕೋಟಿ
- ಆರ್‌ಆರ್‌ಆರ್ (RRR): ₹1230 ಕೋಟಿ
- ಕೆಜಿಎಫ್ ಚಾಪ್ಟರ್ 2: ₹1215 ಕೋಟಿ
- ಜವಾನ್: ₹1160 ಕೋಟಿ
- ಪಠಾಣ್: ₹1055 ಕೋಟಿ
- ಕಲ್ಕಿ 2898 AD: ₹1042.25 ಕೋಟಿ
- ಧುರಂಧರ್: ₹1006.7 ಕೋಟಿ (ಇನ್ನೂ ಪ್ರದರ್ಶನ ಕಾಣುತ್ತಿದೆ)
ಚಿತ್ರದ ಕಥೆ ಮತ್ತು ತಾರಾಗಣ: ‘ಧುರಂಧರ್‘ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಹಮ್ಜಾ ಅಲಿ ಮಜಾರಿ (ಅಲಿಯಾಸ್ ಜಸ್ಕಿರತ್ ಸಿಂಗ್ ರಂಗಿ) ಎಂಬ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಪಾಕಿಸ್ತಾನದ ಬಲೂಚ್ ಗ್ಯಾಂಗ್ ಒಂದನ್ನು ಭೇದಿಸುವ ರೋಚಕ ಕಥೆಯನ್ನು ಈ ಸಿನಿಮಾ ಹೊಂದಿದೆ. ಖಳನಾಯಕನಾಗಿ ಅಕ್ಷಯ್ ಖನ್ನಾ ನಟಿಸಿದ್ದು, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
2026ರಲ್ಲಿ ಬರಲಿದೆ ಭಾಗ-2: ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ‘ಧುರಂಧರ್ 2′ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. 2026ರ ಮಾರ್ಚ್ 19 ರಂದು ರಂಜಾನ್ ಹಬ್ಬದ ಪ್ರಯುಕ್ತ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಹಾಗೂ ಹಿಂದಿಯಲ್ಲಿ ಈ ಚಿತ್ರದ ಎರಡನೇ ಭಾಗ ತೆರೆಕಾಣಲಿದೆ.






