ಉದಯಪುರ(ರಾಜಸ್ಥಾನ): ಸಹೋದ್ಯೋಗಿಯ ಹುಟ್ಟುಹಬ್ಬದ ಪಾರ್ಟಿಗೆ ತೆರಳಿದ್ದ ಮಹಿಳೆಯೊಬ್ಬರ ಬಾಳಲ್ಲಿ ಆ ರಾತ್ರಿ ಕರಾಳ ರಾತ್ರಿಯಾಗಿ ಮಾರ್ಪಟ್ಟಿದೆ. ಖಾಸಗಿ ಐಟಿ ಕಂಪನಿಯೊಂದರ ಮ್ಯಾನೇಜರ್ ಆಗಿರುವ ಮಹಿಳೆಯ ಮೇಲೆ ಅದೇ ಕಂಪನಿಯ ಸಿಇಒ ಸೇರಿದಂತೆ ಮೂವರು ಸಾಮೂಹಿಕ ಅ*ತ್ಯಾ*ಚಾರ ಎಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಪ್ರವಾಸಿ ನಗರಿ ಉದಯಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಕಂಪನಿ ಸಿಇಒ ಮತ್ತು ಮಹಿಳಾ ಎಕ್ಸಿಕ್ಯೂಟಿವ್ ಹೆಡ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು? ಪೊಲೀಸರ ಮಾಹಿತಿಯ ಪ್ರಕಾರ, ಕಳೆದ ಶನಿವಾರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು. ಪಾರ್ಟಿ ಮುಗಿದ ನಂತರ ಇತರ ಅತಿಥಿಗಳೆಲ್ಲರೂ ತೆರಳಿದ್ದರು, ಆದರೆ ಮಹಿಳಾ ಮ್ಯಾನೇಜರ್ ಒಬ್ಬರೇ ಉಳಿದುಕೊಂಡಿದ್ದರು. ಈ ವೇಳೆ ಕಂಪನಿಯ ಮಹಿಳಾ ಎಕ್ಸಿಕ್ಯೂಟಿವ್ ಹೆಡ್, ಸಂತ್ರಸ್ತೆಯನ್ನು ಮನೆಗೆ ಡ್ರಾಪ್ ಮಾಡುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಕಾರಿನಲ್ಲಿ ಸಿಇಒ ಹಾಗೂ ಎಕ್ಸಿಕ್ಯೂಟಿವ್ ಹೆಡ್ ಪತಿ (ಮೀರತ್ ನಿವಾಸಿ) ಕೂಡ ಇದ್ದರು.
ಚಲಿಸುವ ಕಾರಿನಲ್ಲಿ ದುಷ್ಕೃತ್ಯ: ದಾರಿ ಮಧ್ಯೆ ಆರೋಪಿಗಳು ಅಂಗಡಿಯೊಂದರಲ್ಲಿ ಸಿಗರೇಟ್ ಮಾದರಿಯ ವಸ್ತುವನ್ನು ಖರೀದಿಸಿ ಸಂತ್ರಸ್ತೆಗೆ ನೀಡಿದ್ದಾರೆ (ಮತ್ತೊಂದು ವರದಿಯ ಪ್ರಕಾರ ಬಲವಂತವಾಗಿ ಮದ್ಯಪಾನ ಮಾಡಿಸಲಾಗಿದೆ). ಇದನ್ನು ಸೇವಿಸಿದ ನಂತರ ಪ್ರಜ್ಞೆ ಕಳೆದುಕೊಂಡ ಸಂತ್ರಸ್ತೆ, ಎಚ್ಚರವಾದಾಗ ಚಲಿಸುವ ಕಾರಿನಲ್ಲೇ ತಮ್ಮ ಮೇಲೆ ಲೈಂ*ಗಿಕ ದೌರ್ಜನ್ಯ ನಡೆಯುತ್ತಿರುವುದನ್ನು ಅರಿತಿದ್ದಾರೆ. ಎಷ್ಟೇ ಪ್ರತಿರೋಧ ಒಡ್ಡಿದರೂ, ಕಾರಿನಲ್ಲಿದ್ದ ಮೂವರು ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತೆ ತಮ್ಮ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ವೈದ್ಯಕೀಯ ವರದಿಯಲ್ಲಿ ದೃಢ: ನಸುಕಿನ ಜಾವದವರೆಗೂ ಕಾರಿನಲ್ಲೇ ಒತ್ತೆಯಾಳಾಗಿರಿಸಿಕೊಂಡು, ನಂತರ ಸಂತ್ರಸ್ತೆಯನ್ನು ಅವರ ಮನೆಯ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ನೋವು ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಲೈಂ*ಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ನಂತರ ಅವರು ಸುಖೇರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂವರ ಬಂಧನ: ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗುರುವಾರ ಸಿಇಒ, ಮಹಿಳಾ ಉದ್ಯೋಗಿ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಉದಯಪುರ ಎಸ್‌ಪಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.






