ಬೆಂಗಳೂರು: ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿ ಸಾಗುವಾಗ ಪ್ರತಿಯೊಬ್ಬರ ಕಣ್ಣು ಅಲ್ಲಿನ ಒಂದು ವಿಶಿಷ್ಟ ಕಟ್ಟಡದ ಮೇಲೆ ಬೀಳುತ್ತದೆ. ಅದುವೇ 34 ಮಹಡಿಗಳ ಕಿಂಗ್‌ಫಿಷರ್ ಟವರ್ಸ್.ಈ ಕಟ್ಟಡದ ತುತ್ತತುದಿಯಲ್ಲಿ ಅಮೇರಿಕಾದ ‘ವೈಟ್ ಹೌಸ್’ ಮಾದರಿಯಲ್ಲೇ ಒಂದು ಭವ್ಯ ಬಂಗಲೆ ಇದೆ. ಅದುವೇ ವಿಜಯ್ ಮಲ್ಯ (VijayMallya) ಕಟ್ಟಿರುವ ಸ್ಕೈ ಮ್ಯಾನ್ಸನ್.
ಸುಮಾರು ₹180 ಕೋಟಿ ($20 ಮಿಲಿಯನ್) ಮೌಲ್ಯದ ‘ಸ್ಕೈ ಮ್ಯಾನ್ಸನ್’ (SkyMansion) ಕೇವಲ ಐಷಾರಾಮಿಗಾಗಿ ಕಟ್ಟಿದ್ದಲ್ಲ. ತನ್ನ ಬಾಲ್ಯದ ನೆನಪುಗಳು ಜೀವಂತವಾಗಿರಬೇಕು. ತನ್ನ ತಂದೆಯ ಜೊತೆ ಇದ್ದ ಒಟನಾಟ ಪ್ರತಿದಿನವು ಮರುಕಳಿಸಬೇಕೆಂಬ ಬಹು ದೊಡ್ಡ ಕನಸಿನಿಂದ ನಿರ್ಮಿತವಾದ ಈ ಬಂಗಲೆಗೆ ತನ್ನದೇ ಆದ ಒಂದು ಪರಂಪರೆಯ ಕಥೆಯಿದೆ.
ಪೂರ್ವಜರ ಮನೆ ಮತ್ತು ಮಲ್ಯರ ಹಠ
ಇಂದು ಕಿಂಗ್‌ಫಿಷರ್ ಟವರ್ಸ್ ನಿಂತಿರುವ 4.5 ಎಕರೆ ಜಾಗವು ವಿಜಯ್ ಮಲ್ಯರ ತಂದೆ ವಿಠಲ್ ಮಲ್ಯ ಅವರ ನಿವಾಸವಾಗಿತ್ತು. ವಿಜಯ್ ಮಲ್ಯ ಬೆಳೆದದ್ದು, ತಮ್ಮ ಬಾಲ್ಯವನ್ನು ಕಳೆದದ್ದು ಇದೇ ಬಂಗಲೆಯಲ್ಲಿ. ಕಾಲಾನಂತರ ಈ ಜಾಗವನ್ನು ಪುನರಾಭಿವೃದ್ಧಿ (Redevelopment) ಮಾಡಲು ಪ್ರೆಸ್ಟೀಜ್ ಗ್ರೂಪ್‌ನ ಇರ್ಫಾನ್ ರಜಾಕ್ ಅವರು ಮಲ್ಯರನ್ನು ಸಂಪರ್ಕಿಸಿದಾಗ, ಮಲ್ಯ ಒಂದು ಅಸಾಮಾನ್ಯ ಬೇಡಿಕೆ ಇಟ್ಟರು.
ನನ್ನ ತಂದೆ ವಾಸವಿದ್ದ, ನಾನು ಬೆಳೆದ ಈ ಮನೆಯನ್ನು ನಾನು ಕಳೆದುಕೊಳ್ಳಲು ಇಷ್ಟವಿಲ್ಲ. ನೀವು ಇಲ್ಲಿ ಅಪಾರ್ಟ್‌ಮೆಂಟ್ ಕಟ್ಟುವುದಾದರೆ, ನನ್ನ ಬಂಗಲೆಯನ್ನು ಆ ಕಟ್ಟಡದ ಮೇಲ್ಭಾಗದಲ್ಲಿಯೇ ಮರುಸೃಷ್ಟಿಸಬೇಕು ಎಂದು ಹೇಳಿದರು. ಮಲ್ಯರ ಈ ಭಾವನಾತ್ಮಕ ಹಠದ ಫಲವಾಗಿಯೇ 400 ಅಡಿ ಎತ್ತರದಲ್ಲಿ ಈ ಬೃಹತ್ ಮ್ಯಾನ್ಸನ್ ವಿನ್ಯಾಸಗೊಂಡಿತು.
ಆಕಾಶ ಮಹಲಿನ ವಿಶೇಷತೆಗಳು
ಸುಮಾರು 40,000 ಚದರ ಅಡಿ ವಿಸ್ತೀರ್ಣದ ಈ ಪೆಂಟ್‌ಹೌಸ್ ಕೇವಲ ಮನೆಯಲ್ಲ, ಅದು ಸಕಲ ಸೌಲಭ್ಯಗಳಿರುವ ಒಂದು ಸ್ವರ್ಗ.
-
ಇತರ ನಿವಾಸಿಗಳೊಂದಿಗೆ ಹಂಚಿಕೊಳ್ಳದ ಮಲ್ಯರಿಗಾಗಿಯೇ ಮೀಸಲಾದ ಎರಡು ಖಾಸಗಿ ಲಿಫ್ಟ್‌ಗಳು.
-
ಕಟ್ಟಡದ ತುದಿಯಲ್ಲಿ ಅತ್ಯಾಧುನಿಕ ಈಜುಕೊಳ ಹಾಗೂ ಹಚ್ಚ ಹಸಿರಿನ ಹುಲ್ಲುಹಾಸು ಹೊಂದಿದ ಉದ್ಯಾನವನ.
-
ನೇರವಾಗಿ ಮನೆಯ ಮೇಲ್ಛಾವಣಿಯ ಮೇಲೆ ಇಳಿಯಲು ವೈಯಕ್ತಿಕ ಹೆಲಿಪ್ಯಾಡ್ ವ್ಯವಸ್ಥೆ.
-
ಇಡೀ ಬೆಂಗಳೂರು ನಗರವನ್ನು ಕಣ್ಣಾರೆ ಸವಿಯಲು ಸುತ್ತಲೂ ವ್ಯೂ ಪಾಯಿಂಟ್‌ಗಳ ವ್ಯವಸ್ಥೆ.
-
ಐಷಾರಾಮಿ ಜೀವನಕ್ಕೆ ಬೇಕಾದ ವೈನ್ ಸೆಲ್ಲರ್, ಜಿಮ್, ಸಲೂನ್ ಮತ್ತು ಸ್ಪಾ ಒಳಗೊಂಡಿದೆ.
ವಿಧಿಯ ಆಟ: ಎಂದಿಗೂ ವಾಸವಾಗದ ಕನಸಿನ ಮನೆ
ಇಷ್ಟೇಲ್ಲ ಸಕಲ ವೈಭೋಗಗಳಿಂದ ತನ್ನ ತಂದೆಯ ನೆನಪಿಗಾಗಿ ಮತ್ತು ತನ್ನ ಅಂತಿಮ ನಿವಾಸವಾಗಿ ಮಲ್ಯ ರೂಪಿಸಿದ್ದರೋ, ಅಲ್ಲಿ ವಾಸಿಸುವ ಅದೃಷ್ಟ ಅವರಿಗೆ ಸಿಗಲಿಲ್ಲ. 2016 ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ನಷ್ಟ ಮತ್ತು ಬ್ಯಾಂಕ್ ಸಾಲದ ಸುಳಿಗೆ ಸಿಲುಕಿದ ಮಲ್ಯ ಪ್ರೀತಿಯಿಂದ ಕಟ್ಟಿದ್ದ ತನ್ನ ಬಂಗಲೆ ಹಾಗೂ ಭಾರತವನ್ನೇ ತೊರೆದು ಲಂಡನ್‌ಗೆ ಪರಾರಿಯಾದರು.
ಕಟ್ಟಡ ಪೂರ್ಣಗೊಂಡಿದ್ದರೂ, ಈ ಆಕಾಶ ಮಹಲು ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ ಮತ್ತು ಜಾರಿ ನಿರ್ದೇಶನಾಲಯದ (ED) ಕಾನೂನು ಪ್ರಕ್ರಿಯೆಗಳಿಗೆ ಒಳಪಟ್ಟಿದೆ. ಇಂದು ಈ ಕಟ್ಟಡವು ಕೇವಲ ಶ್ರೀಮಂತಿಕೆಯ ಸಂಕೇತವಾಗಿ ಮಾತ್ರವಲ್ಲದೆ, ಬೃಹತ್ ಮಹತ್ವಾಕಾಂಕ್ಷೆ ಮತ್ತು ವಿಧಿಯ ಕ್ರೂರ ಹಾಸ್ಯದ ಸಂಕೇತವಾಗಿ ನಿಂತಿದೆ ಎಂದು ಹೇಳಿದರೆ ತಪ್ಪಾಗದು.






