ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ’45’ (Forty-Five) ಬಿಡುಗಡೆಯಾದ ಸಂಭ್ರಮದ ನಡುವೆಯೇ ಚಿತ್ರತಂಡಕ್ಕೆ ಪೈರಸಿ (Piracy) ಭೂತ ಕಾಡಿದೆ. ಡಿಸೆಂಬರ್ 25 ರಂದು ತೆರೆಕಂಡ ಈ ಅದ್ದೂರಿ ಚಿತ್ರ, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ನಿರ್ಮಾಪಕರಿಗೆ ದೊಡ್ಡ ಆಘಾತ ನೀಡಿದೆ.
ಈ ಬಗ್ಗೆ ನಿರ್ಮಾಪಕ ರಮೇಶ್ ರೆಡ್ಡಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಿಪರ್ಯಾಸವೆಂದರೆ, ಕಿಡಿಗೇಡಿಗಳು ಪೈರಸಿ ಮಾಡಿದ ಲಿಂಕ್ ಅನ್ನು ನೇರವಾಗಿ ನಿರ್ಮಾಪಕರಿಗೇ ಕಳುಹಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. “ತುಂಬಾ ದೊಡ್ಡ ಮಟ್ಟದಲ್ಲಿ ಬಂಡವಾಳ ಹಾಕಿ, ಕಷ್ಟಪಟ್ಟು ಈ ಸಿನಿಮಾ ನಿರ್ಮಿಸಿದ್ದೇನೆ. ಸಿನಿಮಾ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಕೆಲವರು ಪೈರಸಿ ಮಾಡಿ ಚಿತ್ರಕ್ಕೆ ಕುತ್ತು ತರುತ್ತಿದ್ದಾರೆ. ಸ್ವತಃ ನನಗೇ ಲಿಂಕ್ ಕಳುಹಿಸಿರುವುದು ಆಘಾತಕಾರಿ” ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪೈರಸಿ ವಿರುದ್ಧ ಈಗಾಗಲೇ ಕಾನೂನು ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿರುವ ರಮೇಶ್ ರೆಡ್ಡಿ, “ದಯವಿಟ್ಟು ಯಾರೂ ಪೈರಸಿ ಕಾಪಿಯನ್ನು ನೋಡಬೇಡಿ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ನಮ್ಮಂತಹ ನಿರ್ಮಾಪಕರನ್ನು ಮತ್ತು ಒಳ್ಳೆಯ ಸಿನಿಮಾವನ್ನು ಬೆಂಬಲಿಸಿ” ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರವಾದ ’45’ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಹೊತ್ತಲ್ಲೇ ಪೈರಸಿ ಹಾವಳಿ ನಿರ್ಮಾಪಕರ ನಿದ್ದೆಗೆಡಿಸಿದೆ.






