ಚೆನ್ನೈ: ತತ್ಕಾಲ್ ಇ-ಟಿಕೆಟ್ ಬುಕಿಂಗ್‌ಗೆ ಆಧಾರ್ ಕಡ್ಡಾಯಗೊಳಿಸಿದ ಆರು ತಿಂಗಳ ಬಳಿಕ, ಭಾರತೀಯ ರೈಲ್ವೆ ಇಲಾಖೆ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಐಆರ್‌ಸಿಟಿಸಿ (IRCTC) ಪೋರ್ಟಲ್ ಮೂಲಕ ಮುಂಗಡ ಕಾಯ್ದಿರಿಸುವಿಕೆ ಅವಧಿಯ (Advance Reservation Period) ಮೊದಲ ದಿನದಂದು ಟಿಕೆಟ್ ಬುಕ್ ಮಾಡಲು ಆಧಾರ್ ದೃಢೀಕರಣವನ್ನು (Aadhaar Verification) ಕಡ್ಡಾಯಗೊಳಿಸಲಾಗಿದೆ.
ಜನವರಿ 12ರಿಂದ ಈ ಹೊಸ ನಿಯಮ ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ನೈಜ ಪ್ರಯಾಣಿಕರಿಗೆ ಮಾತ್ರ ಟಿಕೆಟ್ ಸಿಗುವಂತಾಗಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ರೈಲ್ವೆ ನಿಲ್ದಾಣದ ಕೌಂಟರ್‌ಗಳಲ್ಲಿ ನೇರವಾಗಿ ಹೋಗಿ ಫಾರ್ಮ್ ತುಂಬಿ ಟಿಕೆಟ್ ಪಡೆಯುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅವರು ಎಂದಿನಂತೆ ಯಾವುದಾದರೂ ಮಾನ್ಯವಾದ ಗುರುತಿನ ಚೀಟಿ ನೀಡಿ ಕಾಗದದ ಟಿಕೆಟ್ ಪಡೆಯಬಹುದು.
ಹಂತ ಹಂತವಾಗಿ ಜಾರಿ: ರೈಲ್ವೆ ಮಂಡಳಿಯ ಆದೇಶದ ಪ್ರಕಾರ, ರೈಲು ಹೊರಡುವ 60 ದಿನಗಳ ಮುಂಚಿತವಾಗಿ ಬುಕಿಂಗ್ ಪ್ರಾರಂಭವಾಗುವ ದಿನದಂದು, ಆಧಾರ್ ದೃಢೀಕರಣ ಮಾಡದ ಬಳಕೆದಾರರಿಗೆ ಟಿಕೆಟ್ ಬುಕ್ ಮಾಡಲು ಅವಕಾಶವಿರುವುದಿಲ್ಲ.
ಡಿಸೆಂಬರ್ 29 ರಿಂದ: ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೇವಲ ಆಧಾರ್ ದೃಢೀಕರಿಸಿದ ಬಳಕೆದಾರರಿಗೆ ಮಾತ್ರ ಬುಕಿಂಗ್ ಅವಕಾಶ.
ಜನವರಿ 5 ರಿಂದ: ಈ ಸಮಯವನ್ನು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗುವುದು.
ಜನವರಿ 12 ರಿಂದ: ಬೆಳಗ್ಗೆ 8 ರಿಂದ ಮಧ್ಯರಾತ್ರಿಯವರೆಗೆ (ದಿನವಿಡೀ) ಕೇವಲ ಆಧಾರ್ ವೆರಿಫೈ ಆದ ಬಳಕೆದಾರರಿಗೆ ಮಾತ್ರ ಮೊದಲ ದಿನದ ಬುಕಿಂಗ್ ಲಭ್ಯವಿರುತ್ತದೆ.
ಏಕೆ ಈ ನಿರ್ಧಾರ?
ಚೆನ್ನೈ-ಹೌರಾ, ಚೆನ್ನೈ-ನವದೆಹಲಿ, ಚೆನ್ನೈ-ಮಂಗಳೂರು ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳು ಖಾಲಿಯಾಗುತ್ತಿವೆ. ಏಜೆಂಟ್‌ಗಳು ಅಥವಾ ಕಾಳಸಂತೆಯಲ್ಲಿ ಟಿಕೆಟ್ ಮಾರುವವರ ಹಾವಳಿ ತಡೆಯಲು ಮತ್ತು ನಿಜವಾದ ಪ್ರಯಾಣಿಕರಿಗೆ ಸೀಟುಗಳು ಲಭ್ಯವಾಗುವಂತೆ ಮಾಡಲು ರೈಲ್ವೆ ಇಲಾಖೆ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






