ಕಲಬುರಗಿ: ಮೂಢನಂಬಿಕೆಯ ಅಂಧಕಾರಕ್ಕೆ ಕಲಬುರಗಿ ಮೂಲದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ತಲೆ ಸುತ್ತು ಬಂದು ಬಿದ್ದ ಮಹಿಳೆಗೆ ‘ದೆವ್ವ’ (Ghost)ಹಿಡಿದಿದೆ ಎಂಬ ಶಂಕೆಯಿಂದ ಆಕೆಯ ಗಂಡನ ಮನೆಯವರೇ ಬೇವಿನ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ಮಹಾರಾಷ್ಟ್ರದ ಮುರುಮ್‌ನಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ನಿವಾಸಿ ಮುಕ್ತಾಬಾಯಿ (38). (Muktabai) ಈಕೆಯನ್ನು ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.
ನಾಲ್ಕು ದಿನಗಳ ಹಿಂದೆ ಮುಕ್ತಾಬಾಯಿಗೆ ತಲೆ ಸುತ್ತು ಬಂದು ಮನೆಯ ಮುಂದೆ ಬಿದ್ದಿದ್ದರು. ಇದನ್ನು ಕಂಡ ಗಂಡನ ಮನೆಯವರು, ಆಕೆಗೆ ದೆವ್ವ ಹಿಡಿದಿದೆ ಎಂದು ಭಾವಿಸಿ ಬೇವಿನ ಕಟ್ಟಿಗೆಯಿಂದ ರಾತ್ರಿ ಮತ್ತು ಬೆಳಿಗ್ಗೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಮಹಿಳೆಯನ್ನು ದೇವಲ ಗಾಣಗಾಪುರದ ದತ್ತನ ಸನ್ನಿಧಿಗೆ ಕರೆತಂದ ಸಂಬಂಧಿಕರು, ಅಲ್ಲಿಯೂ ದೆವ್ವ ಬಿಡಿಸಲು ಹಲ್ಲೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಸತತ ಹಲ್ಲೆಯಿಂದ ತೀವ್ರವಾಗಿ ಸುಸ್ತಾಗಿ ಬಿದ್ದ ಮುಕ್ತಾಬಾಯಿ ಸ್ಥಿತಿ ಕಂಡು ಗಾಬರಿಗೊಂಡ ಗಂಡನ ಮನೆಯವರು, ಆಕೆಯ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಾಯಿ ತಕ್ಷಣ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ನಿನ್ನೆ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ.
ಗಿಡ್ಡೆಪ್ಪನ ಸಹೋದರ ಹಾಗೂ ಭಾವಮೈದ ಸೇರಿದಂತೆ ಸಂಬಂಧಿಕರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಮಹಾರಾಷ್ಟ್ರದ ಮುರುಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.






