ಬೆಂಗಳೂರು: ಯಲಹಂಕದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಹಾಗೂ ವಸೀಂ ಲೇಔಟ್‌ನಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕ್ರಮವನ್ನು ‘ಬುಲ್ಡೋಜರ್ ಜಸ್ಟಿಸ್’ ಎಂದು ಟೀಕಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ರಾಜ್ಯ ಸರ್ಕಾರದ ಸಚಿವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಸ್ಪಷ್ಟನೆ
ಪಿಣರಾಯಿ ವಿಜಯನ್ ಅವರು ಹಿರಿಯ ನಾಯಕರಾಗಿದ್ದರೂ, ಇಲ್ಲಿನ ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಮಾತನಾಡಿದ್ದಾರೆ. ಸರ್ಕಾರಿ ಜಾಗ ಹಾಗೂ ಡಂಪಿಂಗ್ ಸೈಟ್‌ಗಳಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಶಾಸಕರು ಮತ್ತು ಅಧಿಕಾರಿಗಳು ಕಾನೂನುಬದ್ಧವಾಗಿ ತೆರವು ಮಾಡಿದ್ದಾರೆ. ಬೆಂಗಳೂರಿನ ಪರಿಸ್ಥಿತಿ ನಮಗೆ ಚೆನ್ನಾಗಿ ತಿಳಿದಿದೆ.
ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡಿರುವ ಅರ್ಹ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಹಾಗೂ ನಾವೂ ಉತ್ತರ ಭಾರತದ ಮಾದರಿಯಲ್ಲಿ ದ್ವೇಷಕ್ಕಾಗಿ ಬುಲ್ಡೋಜರ್ ಬಳಸುತ್ತಿಲ್ಲ, ಇದು ಕೇವಲ ಒತ್ತುವರಿ ತೆರವು. ಚುನಾವಣೆ ಹತ್ತಿರವಿರುವ ಕಾರಣ ಪಿಣರಾಯಿ ವಿಜಯನ್ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಪಿಣರಾಯಿ ವಿಜಯನ್ ಅವರು ತಮ್ಮ ಅಂಗಳದಲ್ಲಿ (ಕೇರಳದಲ್ಲಿ) ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡುತ್ತಿಲ್ಲ. ಕೇರಳದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಬಗ್ಗೆ ಮೌನ ವಹಿಸಿರುವ ಅವರು, ಇಲ್ಲಿನ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ.
ನಾವೂ ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಿದ್ದೇವೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ನಮ್ಮ ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಖರ್ಗೆ (Priyank Kharge) ಕೂಡ ತಿರುಗೇಟು ನೀಡಿದ್ದಾರೆ.






