ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವುದಿಲ್ಲ ಎಂಬ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ಮೈತ್ರಿ ಕುರಿತಾದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಮುತ್ಸದ್ದಿ ರಾಜಕಾರಣಿಗಳು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ನರೇಂದ್ರ ಮೋದಿಯವರ ಕೈ ಬಲಪಡಿಸಲು ಅವರು ಎನ್‌ಡಿಎ (NDA) ಮಿತ್ರಪಕ್ಷವಾಗಿದ್ದಾರೆ. ಸ್ಥಳೀಯ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳಬೇಕು ಎಂದು ಹೈಕಮಾಂಡ್ ಸೂಚಿಸಿದರೆ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲೇ ನಾವು ಚುನಾವಣೆ ಎದುರಿಸುತ್ತೇವೆ.
ಸ್ಥಳೀಯ ಸಂಸ್ಥೆಗಳಿಗೆ ಮೈತ್ರಿ ಇರುವುದಿಲ್ಲ ಎಂದು ನಾನು ಹೇಳಿಲ್ಲ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಕುಳಿತು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧ. ಹಾಗೂ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎನ್ನುವುದು ಕಾರ್ಯಕರ್ತರ ಆಶಯ. ಈ ಹಿಂದಿನ ಚುನಾವಣೆಗಳಲ್ಲಿ ನಾವು ಬಹುಮತಕ್ಕೆ ಕೇವಲ 5-10 ಸೀಟುಗಳಿಂದ ವಂಚಿತರಾಗಿದ್ದೆವು. ರಾಜ್ಯಾಧ್ಯಕ್ಷನಾಗಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವುದು ನನ್ನ ಕರ್ತವ್ಯ ಎಂದು ಹೇಳಿದರು.
ಇದೇ ವೇಳೆ “ಬಿಜೆಪಿ ಯಾವತ್ತಾದರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆಯಾ?” ಎಂದು ಸಿದ್ದರಾಮಯ್ಯ ಹೇಳಿರುವುದಕ್ಕೆ ಪ್ರತಿಕ್ರಯಿಸಿದ ವಿಜಯೇಂದ್ರ ಅವರು, ಸಿದ್ದರಾಮಯ್ಯ ಅವರ ಆ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಮುಂದಿನ ಬಾರಿ ನಾವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ಧರಾಮಯ್ಯ ಮತ್ತು ಎಂ.ಬಿ. ಪಾಟೀಲ್‌ಗೆ ಸವಾಲು ಹಾಕಿದರು.






