ಪಾಟ್ನಾ: ಬಿಹಾರದ ಜಮುಯಿ (Jamui) ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸರಕು ಸಾಗಣೆ ರೈಲಿನ 8 ಬೋಗಿಗಳು ಹಳಿ ತಪ್ಪಿದ (Goods Train Derail) ಪರಿಣಾಮ, ಪ್ರಮುಖವಾದ ಹೌರಾ-ಪಾಟ್ನಾ-ದೆಹಲಿ ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಪೂರ್ವ ರೈಲ್ವೆ ವಲಯದ ಅಸನ್ಸೋಲ್ ವಿಭಾಗಕ್ಕೆ ಸೇರಿದ ಲಹಬೋನ್ ಮತ್ತು ಸಿಮುಲ್ತಲಾ ರೈಲ್ವೆ ನಿಲ್ದಾಣಗಳ ನಡುವೆ ಶನಿವಾರ ರಾತ್ರಿ 11.25ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಗೂಡ್ಸ್ ರೈಲಿನ ಬೋಗಿಗಳು ಹಳಿ ತಪ್ಪಿದ ರಭಸಕ್ಕೆ ಹಳಿಗೆ ಹಾನಿಯಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಸುಮಾರು ಎರಡು ಡಜನ್‌ಗೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ರಾತ್ರಿ ವೇಳೆ ಸಂಭವಿಸಿದ ಘಟನೆಯಿಂದಾಗಿ ವಿವಿಧ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಘಟನಾ ಸ್ಥಳಕ್ಕೆ ಅಸನ್ಸೋಲ್, ಮಧುಪುರ ಮತ್ತು ಝಾಜಾ ನಿಲ್ದಾಣಗಳಿಂದ ತಕ್ಷಣವೇ ಅಪಘಾತ ಪರಿಹಾರ ರೈಲುಗಳನ್ನು (Accident Relief Trains) ಕಳುಹಿಸಲಾಗಿದೆ. ಹಳಿಗಳನ್ನು ಸರಿಪಡಿಸಿ, ಬೋಗಿಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಆದಷ್ಟು ಬೇಗ ರೈಲು ಸಂಚಾರವನ್ನು ಸಹಜ ಸ್ಥಿತಿಗೆ ತರಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






