ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic Movie) ಸಿನಿಮಾದ ಅಪ್‌ಡೇಟ್‌ಗಳು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿವೆ. ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿರುವಂತೆಯೇ, ಚಿತ್ರತಂಡ ಪ್ರಮುಖ ಪಾತ್ರಗಳ ಪರಿಚಯ ಮಾಡುತ್ತಿದೆ. ಇದೀಗ ಬಾಲಿವುಡ್‌ನ ಜನಪ್ರಿಯ ನಟಿ ಹುಮಾ ಖುರೇಷಿ (Huma Qureshi) ಅವರ ಆಕರ್ಷಕ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಲಾಗಿದೆ.
ಚಿತ್ರದಲ್ಲಿ ಹುಮಾ ಖುರೇಷಿ ‘ಎಲಿಜಬೆತ್’ (Elizabeth) ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ವಿಂಟೇಜ್ ಕಾರಿನ ಮುಂದೆ ನಿಂತಿರುವ ಹುಮಾ, ರೆಟ್ರೋ ಶೈಲಿಯ ಗ್ಲಾಮರಸ್ ಲುಕ್‌ನಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ. ಈಗಾಗಲೇ ಬಾಲಿವುಡ್‌ನಲ್ಲಿ ‘ಮಹಾರಾಣಿ’ಯಾಗಿ ಮಿಂಚಿರುವ ಹುಮಾ, ‘ಟಾಕ್ಸಿಕ್’ ಪ್ರಪಂಚದಲ್ಲಿ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.
ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಚಿತ್ರತಂಡ ಭರ್ಜರಿ ಪ್ರಚಾರ ಆರಂಭಿಸಿದೆ. ಕಳೆದ ವಾರವಷ್ಟೇ ಬಾಲಿವುಡ್‌ನ ಮತ್ತೋರ್ವ ನಟಿ ಕಿಯಾರಾ ಅಡ್ವಾಣಿ ಅವರ ‘ನಾದಿಯಾ’ ಪಾತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ಎಲಿಜಬೆತ್ ಸರದಿ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.
ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಸೇರಿದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಅಕ್ಷಯ್ ಒಬೆರಾಯ್, ತಾರಾ ಸುತಾರಿಯಾ, ಟೊವಿನೋ ಥಾಮಸ್ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 2026ರ ಮಾರ್ಚ್ 19ರಂದು ‘ಟಾಕ್ಸಿಕ್’ ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.






