ಬೆಳಗಾವಿ: ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ಮೊನ್ನೆ ನಡೆದ ಅಂತ್ಯಸಂಸ್ಕಾರವೊಂದು ಇಡೀ ನಾಡಿನ ಗಮನ ಸೆಳೆದಿದೆ. ರಕ್ತ ಸಂಬಂಧಿಕರೇ ಕೈಬಿಟ್ಟಿದ್ದ ವೃದ್ಧೆಯೊಬ್ಬರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಕುಟುಂಬವೊಂದು (Muslim Family) ಹಿಂದೂ ಸಂಪ್ರದಾಯದಂತೆಯೇ ನೆರವೇರಿಸಿ ಸೌಹಾರ್ದತೆಯ ಉದಾಹರಣೆ ನೀಡಿದೆ.
ಕಳೆದ 20 ವರ್ಷಗಳಿಂದ ನ್ಯೂ ಗಾಂಧಿ ನಗರದ ಮಹಮ್ಮದ್ ಹನೀಫ್ (Mohammed Hanif) ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಶಾಂತಾ ಅವರನ್ನು ಆ ಕುಟುಂಬ ತನ್ನ ಸ್ವಂತ ತಾಯಿಯಂತೆಯೇ ನೋಡಿಕೊಂಡಿತ್ತು. ಪತಿಯ ನಿಧನದ ನಂತರ ಶಾಂತಾ ಅವರ ಸ್ವಂತ ಕುಟುಂಬಸ್ಥರು ಅವರನ್ನು ದೂರ ಮಾಡಿದ್ದರು. ಇಂತಹ ಕಷ್ಟದ ಸಮಯದಲ್ಲಿ ಹನೀಫ್ ಕುಟುಂಬ ಅವರಿಗೆ ಆಸರೆಯಾಗಿತ್ತು.
ವಯೋಸಹಜ ಅನಾರೋಗ್ಯಕ್ಕೆ ತುತ್ತಾದಾಗ ಹನೀಫ್ ಅವರೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಕಳೆದ ವಾರ ಸ್ಥಿತಿ ಗಂಭೀರವಾದಾಗ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರ ಸಂಬಂಧಿಕರು ಶವ ಸಂಸ್ಕಾರ ಮಾಡಲು ನಿರಾಕರಿಸಿದರು.
ಕೊನೆಗೆ ಹನೀಫ್ ಹಾಗೂ ಅವರ ಕುಟುಂಬದ ಸದಸ್ಯರೇ ಮುಂದೆ ನಿಂತು, ಸದಾಶಿವನಗರದ ಸ್ಮಶಾನದಲ್ಲಿ ಸಂಪೂರ್ಣ ಹಿಂದೂ ವಿಧಿವಿಧಾನಗಳೊಂದಿಗೆ ಶಾಂತಾ ಅವರ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಘಟನೆಯಲ್ಲಿ ಹನೀಫ್ ಅವರಿಗೆ ಮಾಜಿ ಮೇಯರ್ ವಿಜಯ್ ಮೋರೆ ಹಾಗೂ ಇಕ್ಬಾಲ್ ಜಕಾತಿ ಅವರು ಸಾಥ್ ನೀಡಿದ್ದು, ಬೆಳಗಾವಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.






