ಬೀದರ್: ಚುನಾವಣಾ ಸಮಯದಲ್ಲಿ ಪಡೆದಿದ್ದ ಲಕ್ಷಾಂತರ ರೂಪಾಯಿ ಸಾಲವನ್ನು ಮರುಪಾವತಿಸದೆ ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಬೀದರ್ನ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ (Basavakalyan BJP MLA) ಅವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ :
2023ರ ವಿಧಾನಸಭಾ ಚುನಾವಣೆ ವೇಳೆ ಶಾಸಕ ಶರಣು ಸಲಗರ್ ಅವರು ಉದ್ಯಮಿ ಸಂಜು ಸುಗುರೆ (Sanju Sugure) ಎಂಬುವರಿಂದ ₹99 ಲಕ್ಷ ಸಾಲ ಪಡೆದಿದ್ದರು. ಸಾಲ ಪಡೆಯುವಾಗ ಶಾಸಕರು ಉದ್ಯಮಿಗೆ ಖಾಲಿ ಚೆಕ್ ಹಾಗೂ ತಮ್ಮ ಲೆಟರ್ ಹೆಡ್ ಮೇಲೆ ಸಹಿ ಮಾಡಿ ಭದ್ರತೆಯಾಗಿ ನೀಡಿದ್ದರು. ಉದ್ಯಮಿ ಎಷ್ಟೇ ಬಾರಿ ಹಣ ಕೇಳಿದರೂ ಶಾಸಕರು ಸಾಲ ಮರುಪಾವತಿಸಿರಲಿಲ್ಲ. ಅಂತಿಮವಾಗಿ 14-09-2025 ರಂದು ಹಣ ನೀಡುವುದಾಗಿ ಒಪ್ಪಿ ಚೆಕ್ ನೀಡಿದ್ದರು.
ಆದರೆ, 6-09-2025 ರಂದು ಚೆಕ್ ಬ್ಯಾಂಕಿಗೆ ಹಾಕುವ ಕುರಿತು ಖಾತ್ರಿಪಡಿಸಿಕೊಳ್ಳಲು ಶಾಸಕರ ಮನೆಗೆ ತೆರಳಿದ್ದ ಉದ್ಯಮಿಯ ಪತ್ನಿ ಮತ್ತು ಮಗನಿಗೆ ಶಾಸಕರು ಅವಾಚ್ಯ ಶಬ್ದಗಳಿಂದ ಬೈದು, ಧಮ್ಕಿ ಹಾಕಿದ್ದಾರೆ. ಹಾಗೂ 19-09-2025 ರಂದು ಶಾಸಕರು ನೀಡಿದ್ದ ಚೆಕ್ ಅನ್ನು ಬ್ಯಾಂಕಿಗೆ ಹಾಕಿದಾಗ, ಕರ್ನಾಟಕ ಬ್ಯಾಂಕ್‌ನಲ್ಲಿರುವ ಶಾಸಕರ ಖಾತೆಯು ಈಗಾಗಲೇ ಮುಚ್ಚಲ್ಪಟ್ಟಿದೆ (Account Closed) ಎಂಬ ಮಾಹಿತಿ ಬಂದು ಚೆಕ್ ವಾಪಸ್ (Cheque Bounce) ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉದ್ಯಮಿ ಸಂಜು ಸುಗುರೆ ಅವರು ಬೆಂಗಳೂರಿನ ACJM ಕೋರ್ಟ್ನಲ್ಲಿ ಈ ಕುರಿತು ದಾವೆ ಹೂಡಿದ್ದರು. ನ್ಯಾಯಾಲಯದ ಸೂಚನೆಯ ಮೇರೆಗೆ ಈಗ ಬಸವಕಲ್ಯಾಣ ನಗರ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






