ಬೆಂಗಳೂರು: ದಶಕಗಳ ಕಾಲ ವೀರಶೈವ ಮಹಾಸಭಾವನ್ನು ಮುನ್ನಡೆಸಿದ್ದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಅಗಲಿಕೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದೆ. ಪ್ರಸ್ತುತ ಈಶ್ವರ ಖಂಡ್ರೆ ಅವರು ಹಂಗಾಮಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದು, ಪೂರ್ಣಾವಧಿ ಅಧ್ಯಕ್ಷರಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B.S. Yediyurappa) ಅವರನ್ನು ನೇಮಿಸುವ ಕುರಿತು ಸಮಾಜದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿವೆ.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಹಲವಾರು ಘಟಾನುಘಟಿ ನಾಯಕರಿದ್ದರೂ, ಬಿ.ಎಸ್. ಯಡಿಯೂರಪ್ಪ ಅವರು ಸಮುದಾಯದ ಪ್ರಶ್ನಾತೀತ ನಾಯಕ ಎನಿಸಿಕೊಂಡಿದ್ದಾರೆ. ಇತರ ನಾಯಕರ ಹೆಸರುಗಳಿದ್ದರೂ, ಇಡೀ ಸಮುದಾಯವನ್ನು ಒಗ್ಗೂಡಿಸುವ ಶಕ್ತಿ ಬಿಎಸ್‌ವೈಗೆ ಇದೆ ಎಂಬ ಅಭಿಪ್ರಾಯ ಮಹಾಸಭಾದ ಸದಸ್ಯರಲ್ಲಿದೆ.
ಯಡಿಯೂರಪ್ಪ ಅವರ ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಹಾಗೂ ಶಾಮನೂರು ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರುಗಳು ಕೂಡ ಚರ್ಚೆಯಲ್ಲಿವೆ.
ಸದ್ಯಕ್ಕೆ ಮಹಾಸಭಾದ ಹಂಗಾಮಿ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಕಾರ್ಯಕಾರಿ ಸಮಿತಿ ಸಭೆ ಸೇರಿ ಅಂತಿಮವಾಗಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಮ್ಮತಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.






