ಬೆಂಗಳೂರು: ಯಲಹಂಕದ ಕೋಗಿಲು ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯಿಂದ (Demolition Drive) ಮನೆ ಕಳೆದುಕೊಂಡು ಬೀದಿಪಾಲಾಗಿರುವ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿತ್ತು. ಆದರೆ, ಬ್ಯಾಟರಾಯನಪುರದ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಬಹುಮಹಡಿ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ, ಸಂತ್ರಸ್ತರು ಸೂರು ಪಡೆಯಲು ಇನ್ನೂ ಕನಿಷ್ಠ ಎರಡು ತಿಂಗಳು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಲಿಫ್ಟ್ ಅಳವಡಿಕೆ, ಒಳಚರಂಡಿ ಸಂಸ್ಕರಣಾ ಘಟಕ (STP) ಮತ್ತು ಅಂತಿಮ ಹಂತದ ಫಿನಿಶಿಂಗ್ ಕೆಲಸಗಳು ಬಾಕಿ ಇರುವುದು ಕಂಡುಬಂದಿದೆ. ಈ ಕೆಲಸ ಮುಗಿಯಲು ಇನ್ನೂ ಎರಡು ತಿಂಗಳು ಬೇಕಾಗುತ್ತದೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ. ಆದರೆ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಮಾತ್ರ, ‘ಇ’ ಮತ್ತು ‘ಎಫ್‘ ಬ್ಲಾಕ್ಗಳಲ್ಲಿನ ಕೆಲಸವನ್ನು ಒಂದು ವಾರದಲ್ಲಿ ತ್ವರಿತಗತಿಯಲ್ಲಿ ಮುಗಿಸಿ ಸಂತ್ರಸ್ತರಿಗೆ ನೀಡಬಹುದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ಟು 6 ಬ್ಲಾಕ್ ಗಳಿರುವ ಇಲ್ಲಿ 1,187 ಒನ್ ಬಿಎಚ್‌ಕೆ (1BHK) ಫ್ಲಾಟ್‌ಗಳಿವೆ.
ಮೂಲಸೌಕರ್ಯದ ಕೊರತೆ ಮತ್ತು ಹಣದ ಚಿಂತೆ: ಈ ಹೊಸ ವಸತಿ ಸಮುಚ್ಚಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ಸುತ್ತಲೂ ಸಿಮೆಂಟ್ ಮತ್ತು ಮರಳು ಕಾರ್ಖಾನೆಗಳಿರುವುದರಿಂದ ಧೂಳಿನ ಹಾವಳಿ ವಿಪರೀತವಾಗಿದೆ. ಅಲ್ಲದೆ, ಮಿಟ್ಟಗಾನಹಳ್ಳಿ ಕಸದ ಘಟಕ (Landfill) ಸಮೀಪದಲ್ಲೇ ಇರುವುದು ಮತ್ತು ಬಸ್ ನಿಲ್ದಾಣ 5 ಕಿ.ಮೀ ದೂರದಲ್ಲಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಇನ್ನೊಂದೆಡೆ, “ಸಂಬಂಧಿಕರ ಮನೆಯಲ್ಲಿ ಕಷ್ಟಪಟ್ಟು ಉಳಿದುಕೊಂಡಿದ್ದೇವೆ, ಮಕ್ಕಳ ಶಾಲೆಗಳು ಕೋಗಿಲು ಸುತ್ತಮುತ್ತ ಇರುವುದರಿಂದ ದೂರ ಹೋಗಲು ಆಗುತ್ತಿಲ್ಲ. ಸರ್ಕಾರ ಫ್ಲಾಟ್‌ಗೆ 2.5 ಲಕ್ಷ ರೂ. ಕಟ್ಟುವಂತೆ ಹೇಳಿದೆ, ಸಾಲ ಮಾಡಿಯಾದರೂ ಅಷ್ಟು ಹಣ ಹೊಂದಿಸುವುದು ನಮ್ಮಂತ ಬಡವರಿಗೆ ಅಸಾಧ್ಯ,” ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.






