ದಾವಣಗೆರೆ: ದಾವಣಗೆರೆಯ ರವೀಂದ್ರನಾಥ ಬಡಾವಣೆಯಲ್ಲಿ (Ravindranath Layout) ಪಾರ್ಕ್‌ಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿದ ಆರೋಪದ ಮೇಲೆ 36 ಮನೆಗಳನ್ನು ತೆರವುಗೊಳಿಸಿ ಸುಮಾರು ಮೂರು ತಿಂಗಳಾಗುತ್ತಾ ಬಂದಿದೆ. ಅಂದು ಸೂರು ಕಳೆದುಕೊಂಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ್ದ ಜಿಲ್ಲಾಡಳಿತ, ಇಂದು ಬೀದಿಯಲ್ಲಿ ನಿಲ್ಲಿಸಿದೆ.
ಘಟನೆಯ ಹಿನ್ನೆಲೆ:
ಸ್ಥಳೀಯ ನಿವಾಸಿಗಳು ಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಕಳೆದ ಅಕ್ಟೋಬರ್ 10ರಂದು ಜಿಲ್ಲಾಡಳಿತ ಜೆಸಿಬಿ ಮೂಲಕ 36 ಮನೆಗಳನ್ನು ನೆಲಸಮಗೊಳಿಸಿತ್ತು. ಅಂದು ಮನೆ ತೆರವು ವೇಳೆ ಪ್ರತಿಭಟನೆ ನಡೆಸಿದ್ದ ಜನರಿಗೆ ತಹಶೀಲ್ದಾರ್ ಅಶ್ವತ್ಥ್ ಅವರು ಬೇರೆ ಕಡೆ ನಿವೇಶನ ನೀಡುವ ಭರವಸೆ ನೀಡಿದ್ದರು. ತಾತ್ಕಾಲಿಕವಾಗಿ ಅವರನ್ನು ತುರ್ಚಘಟ್ಟ ಬಳಿಯ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ಈಗ ಆ ನಿರಾಶ್ರಿತರ ಕೇಂದ್ರದಿಂದಲೂ ಸಂತ್ರಸ್ತರನ್ನು ಹೊರಹಾಕಿ ಬೀಗ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಮಹಿಳೆಯರು ಮತ್ತು ಪುಟ್ಟ ಮಕ್ಕಳು ಕೊರೆಯುವ ಚಳಿಯ ನಡುವೆಯೂ ಕೇಂದ್ರದ ಹೊರಗೆ ಕುಳಿತು ಕಣ್ಣೀರು ಹಾಕುತ್ತಿದ್ದಾರೆ.
ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರ ಬಳಿ ನ್ಯಾಯ ಕೇಳಲು ಹೋದರೆ, ನಿಮ್ಮನ್ನು ಜೈಲಿಗೆ ಹಾಕಿಸುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ನಾವು ದಾವಣಗೆರೆಯವರಲ್ಲವೇ? ನಾವು ಮನುಷ್ಯರಲ್ಲವೇ? ನಿಮಗೆ ಅಧಿಕಾರ ಬೇಕಾದಾಗ, ವೋಟ್ ಹಾಕಿಸಿಕೊಳ್ಳುವಾಗ ಮಾತ್ರ ನಾವು ನೆನಪಾಗುತ್ತೇವೆಯೇ?” ಎಂದು ಸಂತ್ರಸ್ತರು ಪ್ರಶ್ನಿಸಿದ್ದಾರೆ.






