ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿದ್ದಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ಮಾದಕ (Drug) ವಸ್ತು ತಯಾರಿಕಾ ಘಟಕಗಳು ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು, ನಗರದಾದ್ಯಂತ ವ್ಯಾಪಕ ಶೋಧಕಾರ್ಯ ಕೈಗೊಂಡಿದ್ದಾರೆ.
ಅಬಕಾರಿ ಉಪ ಅಧೀಕ್ಷಕ ಹೆಚ್.ಕೆ. ರಮೇಶ್ (HK Ramesh) ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು, ನಗರದ ಆಲಿಮ್ ನಗರ, ಸಾಯಿ ಬಾಬಾ ಕಾಲೋನಿ, ಅಬ್ದುಲ್ ಕಲಾಂ ನಗರ, ವಂದೇ ಮಾತರಂ ಕಾಲೋನಿ-1 ಮತ್ತು 2, ಎಲ್ಲಮ್ಮ ಕಾಲೋನಿ ಹಾಗೂ ಬೆಲವತ್ತ ಗ್ರಾಮಗಳಲ್ಲಿ ಪೊಲೀಸರು ಸಾಮೂಹಿಕವಾಗಿ ಅಬಕಾರಿ ದಾಳಿ ( Raids) ನಡೆಸಿದ್ದಾರೆ.
ಮುಖ್ಯವಾಗಿ ಬಾರ್, ರೆಸ್ಟೋರೆಂಟ್ ಮತ್ತು ಮದ್ಯದ ಅಂಗಡಿಗಳ ಮೇಲೆ ನಿಗಾ ಇಡಲಾಗಿದ್ದು, ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ತೆರೆಯುವುದು ಅಥವಾ ಅಕ್ರಮ ದಾಸ್ತಾನು ಮಾಡುವುದರ ಮೇಲೆ ತಲಾಶ್ ನಡೆಸಲಾಗುತ್ತಿದೆ.
ಬೆಂಗಳೂರು-ಮೈಸೂರು ಭಾಗದಲ್ಲಿ ಡ್ರಗ್ಸ್ ನೆಟ್‌ವರ್ಕ್ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ, ಮಾದಕ ವಸ್ತು ಮಾರಾಟ ಮಾಡುವ ಜಾಲಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಪಾರ್ಟಿ ನೆಪದಲ್ಲಿ ಡ್ರಗ್ಸ್ ಬಳಕೆ ಮಾಡುವ ವ್ಯಸನಿಗಳು ಮತ್ತು ಪೆಡ್ಲರ್‌ಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಅಕ್ರಮ ಮದ್ಯ ಅಥವಾ ಯಾವುದೇ ಮಾದಕ ವಸ್ತುಗಳು ಪತ್ತೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.






