ಪಣಜಿ: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಡಲ ನಗರಿ ಗೋವಾ ಸಜ್ಜಾಗಿದೆ. ಲಕ್ಷಾಂತರ ಪ್ರವಾಸಿಗರು ಈಗಾಗಲೇ ಗೋವಾಕ್ಕೆ ಲಗ್ಗೆ ಇಟ್ಟಿದ್ದು, ಜನಸಾಗರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗೋವಾ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಸರ್ಪಗಾವಲು ಹಾಕಿದೆ. ವಿಶೇಷವಾಗಿ ಉತ್ತರ ಗೋವಾದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, 100ಕ್ಕೂ ಹೆಚ್ಚು ಕಡೆಗಳಲ್ಲಿ ‘ನಾಕಾಬಂದಿ‘ ಹಾಕಿ ವಾಹನಗಳು ಮತ್ತು ಪ್ರವಾಸಿಗರ ತಪಾಸಣೆ ನಡೆಸಲಾಗುತ್ತಿದೆ.
ಭದ್ರತೆಯ ಹಿತದೃಷ್ಟಿಯಿಂದ ನಾಕಾಬಂದಿ ಪಾಯಿಂಟ್‌ಗಳಲ್ಲಿ ತಪಾಸಣೆ ನಡೆಸಲು ಸುಮಾರು 700 ಐಆರ್‌ಬಿ (IRB) ಪೊಲೀಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಡಲತೀರಗಳಲ್ಲಿ (Beaches) ಪ್ರವಾಸಿಗರ ಸುರಕ್ಷತೆಗಾಗಿ ಟೂರಿಸ್ಟ್ ಮತ್ತು ಕೋಸ್ಟಲ್ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಲಾಗಿದೆ.
ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದ್ದು, ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ತಪಾಸಣೆ ನಡೆಸಲು ಭಯೋತ್ಪಾದನಾ ನಿಗ್ರಹ ದಳ (ATS), ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು (Dog Squad) ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ರಾತ್ರಿಯಿಡೀ ಪೊಲೀಸರು ಗಸ್ತು ತಿರುಗಲಿದ್ದಾರೆ. ಅಲ್ಲದೆ, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಉಂಟಾಗುವ ವಿಪರೀತ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು ಪ್ರಮುಖ ರಸ್ತೆಗಳಲ್ಲಿ ಹೆಚ್ಚುವರಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ.






