ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ಕಾಮೆಂಟ್ ಮಾಡುತ್ತಿದ್ದವರ ವಿರುದ್ಧ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಸಿಸಿಬಿಗೆ ದೂರು ನೀಡಿದ್ದರು. ಆದರೆ, ದೂರು ನೀಡಿ ಹಲವು ದಿನಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ಬೇರೆ ಮಹಿಳೆ ನೀಡಿದ ದೂರನ್ನು ಕೇವಲ ಒಂದು ದಿನದೊಳಗೆ ಪರಿಹರಿಸಿ ಕ್ರಮ ಕೈಗೊಳ್ಳಲಾಗಿದೆ. ಆದರೆ ನಾನು ನೀಡಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದು ನನಗೆ ಆಶ್ಚರ್ಯ ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದ ಕಾನೂನು ಎಲ್ಲರಿಗೂ ಒಂದೇ ಎಂದು ನಾನು ನಂಬಿದ್ದೆ. ಆದರೆ ಈಗ ಆ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ನನ್ನ ದೂರು ಅವರಿಗೆ ಮುಖ್ಯವಲ್ಲವೇ?. ದೂರಿನ ವಿಚಾರವಾಗಿ ವಕೀಲರು ಫಾಲೋ-ಅಪ್ ಮಾಡಿದರೂ ಸ್ಪಂದಿಸದ ಕಾರಣ ಇಂದು ಖುದ್ದಾಗಿ ಹೋಗಿ ಪೊಲೀಸರಿಗೆ ನೆನಪಿಸಿದ್ದೇನೆ. ಈ ವಿಳಂಬಕ್ಕೆ ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಕಾರಣವಾಗಿರದಿರಲಿ ಎಂದು ಅವರು ಆಶಿಸಿದ್ದಾರೆ.
ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ, ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಟ ದರ್ಶನ್ ಜೈಲು ಪಾಲಾದ ನಂತರ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟ್ರೋಲ್ ಹಾಗೂ ಟೀಕೆಗಳಿಗೆ ಗುರಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರ ಮೊರೆ ಹೋಗಿದ್ದರು.






