ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ ಗೃಹ ಇಲಾಖೆ ಸರ್ವಸನ್ನದ್ಧವಾಗಿದೆ. ಅತಿಯಾಗಿ ಮದ್ಯಪಾನ ಮಾಡಿ ಸಂಕಷ್ಟಕ್ಕೆ ಸಿಲುಕುವವರನ್ನು ರಕ್ಷಿಸಲು ಪೊಲೀಸರು ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Parameshwar) ತಿಳಿಸಿದ್ದಾರೆ.
ನಡೆಯಲು ಅಸಾಧ್ಯವಾದ ಮತ್ತು ಪ್ರಜ್ಞೆ ತಪ್ಪುವ ಹಂತಕ್ಕೆ ಹೋದವರಿಗಾಗಿ ನಗರದ 15 ಕಡೆಗಳಲ್ಲಿ ರೆಸ್ಟಿಂಗ್ ಪ್ಲೇಸ್ ನಿರ್ಮಿಸಲಾಗಿದೆ. ಎಲ್ಲರನ್ನೂ ಮನೆಗೆ ಬಿಡಲು ಸಾಧ್ಯವಿಲ್ಲ, ಆದರೆ ಪ್ರಜ್ಞೆ ಇಲ್ಲದವರನ್ನು ಅಲ್ಲಿ ಇರಿಸಿಕೊಂಡು ನಶೆ ಇಳಿದ ಮೇಲೆ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪಾರ್ಟಿಗಳಲ್ಲಿ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿರುವ ಮಹಿಳೆಯರನ್ನು ಕಿಡಿಗೇಡಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಪೊಲೀಸ್ ಹದ್ದಿನ ಕಣ್ಣಿಟ್ಟಿದ್ದಾರೆ.
ಬೆಂಗಳೂರಿನಲ್ಲಿ 160 ಸ್ಪಾಟ್ ಗುರುತಿಸಲಾಗಿದೆ. ಮಿತಿ ಮೀರಿದ ಕುಡಿದು ವಾಹನ ಚಲಾಯಿಸುವವರ (Drink and Drive) ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅವರು ಸಾಯುವುದು ಮಾತ್ರವಲ್ಲದೆ ಬೇರೆಯವರ ಪ್ರಾಣವನ್ನೂ ತೆಗೆಯುತ್ತಾರೆ. ಪ್ರಾಣ ಉಳಿಸಲು ಎರಡು ದಿನ ಬಿಗಿ ಕ್ರಮ ಅನಿವಾರ್ಯ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.
ಪೊಲೀಸರು ಬಾಡಿ ಕ್ಯಾಮೆರಾ ಧರಿಸಲಿದ್ದು, ಅದು ನೇರವಾಗಿ ಕಮಾಂಡ್ ಸೆಂಟರ್‌ಗೆ ಸಂಪರ್ಕ ಹೊಂದಿರುತ್ತದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಿಶೇಷ ಅಲರ್ಟ್ ಘೋಷಿಸಲಾಗಿದೆ. ಉಗ್ರ ಚಟುವಟಿಕೆಗಳ ಆಯಾಮದಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಾರ್ ಮತ್ತು ಪಬ್‌ಗಳಿಗೆ ಟೈಮಿಂಗ್ಸ್: ಎಲ್ಲಾ ಬಾರ್ ಮತ್ತು ಪಬ್‌ಗಳು ನಿಗದಿತ ಸಮಯದಂತೆ ಅಂದರೆ ರಾತ್ರಿ 1 ಗಂಟೆಗೆ ಮುಚ್ಚಲೇಬೇಕು. ನಿಯಮ ಮೀರುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.






