ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉನ್ನತ ಉದ್ಯೋಗದಲ್ಲಿರುವ ಟೆಕ್ಕಿಯೊಬ್ಬರು ಅಡ್ಡಹಾದಿ ಹಿಡಿದು ಅಂತರರಾಷ್ಟ್ರೀಯ ಗಾಂಜಾ (Drug) ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಗಾಂಜಾ ಕಳ್ಳಸಾಗಣೆ ಆರೋಪದ ಮೇಲೆ ಸಾಫ್ಟ್‌ವೇರ್ ಇಂಜಿನಿಯರ್ ಗಾಡೆ ರೇಣುಕಾ (Gade Renuka) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಟೆಕ್ಕಿ ಆಂಧ್ರಪ್ರದೇಶದಿಂದ ಪ್ರಸಿದ್ಧ ‘ಶೀಲಾವತಿ’ (Sheelavathi) ತಳಿಯ ಗಾಂಜಾವನ್ನು ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ದಾಳಿಯ ವೇಳೆ ಪೊಲೀಸರು ಸುಮಾರು 74 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಲಕ್ಷಾಂತರ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಈಕೆಯ ಜಾಲ ಕೇವಲ ಬೆಂಗಳೂರಿಗೆ ಸೀಮಿತವಾಗಿರದೆ, ತಮಿಳುನಾಡು ಮತ್ತು ಸಮುದ್ರ ಮಾರ್ಗದ ಮೂಲಕ ಶ್ರೀಲಂಕಾಗೂ (Sri Lanka) ಸರಬರಾಜು ಆಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಗೌಪ್ಯ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಈ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ, ಹೆಚ್ಚಿನ ಹಣದ ಆಸೆಗಾಗಿ ಈ ಮಾದಕ ಲೋಕಕ್ಕೆ ಕಾಲಿಟ್ಟಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಈಕೆಯ ಹಿಂದೆ ಇರುವ ಇತರ ಕೈವಾಡಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.






