ಮಥುರಾ: ಪವಿತ್ರ ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಆಯೋಜಿಸಲಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಹೊಸ ವರ್ಷದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಸ್ಥಳೀಯ ಬಾರ್ ಒಂದರಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕೆ ಸಾಧು-ಸಂತರು ಮತ್ತು ಧಾರ್ಮಿಕ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಯೋಜಕರು ಅನಿವಾರ್ಯವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಜನವರಿ 1 ರಂದು ನಡೆಯಲಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಅವರು ಡಿಜೆ (DJ) ಆಗಿ ಪಾಲ್ಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಈ ಸುದ್ದಿ ಹಬ್ಬುತ್ತಿದ್ದಂತೆಯೇ ಸ್ಥಳೀಯ ಧಾರ್ಮಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿತು. ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ದಿನೇಶ್ ಫಲಾಹರಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, “ಇದು ಭಗವಾನ್ ಶ್ರೀಕೃಷ್ಣ ಲೀಲೆಗಳನ್ನು ತೋರಿದ ಪವಿತ್ರ ಭೂಮಿ. ಇಲ್ಲಿ ಸಾಧುಗಳು ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಇಂತಹ ಪುಣ್ಯಕ್ಷೇತ್ರಕ್ಕೆ ಸನ್ನಿ ಲಿಯೋನ್ ಅವರನ್ನು ಆಹ್ವಾನಿಸುವುದು ಬ್ರಜ್ ಭೂಮಿ ಮತ್ತು ಸನಾತನ ಧರ್ಮಕ್ಕೆ ಮಾಡುವ ಅವಮಾನವಾಗಿದೆ” ಎಂದು ಕಿಡಿಕಾರಿದ್ದರು.
ಅಲ್ಲದೆ, “ಅಶ್ಲೀಲತೆಯನ್ನು ಹರಡುವ ಇಂತಹ ವ್ಯಕ್ತಿಗಳನ್ನು ಬ್ರಜ್ ಭೂಮಿಯಿಂದ ದೂರವಿಡಬೇಕು” ಎಂದು ಒತ್ತಾಯಿಸಿದ್ದರು. ಸಾಧುಗಳ ವಿರೋಧಕ್ಕೆ ಮಣಿದ ಆಯೋಜಕರು, ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಜಕ ಮಿಥುಲ್ ಪಾಠಕ್, “ಸ್ಥಳೀಯ ಸಾಧು-ಸಂತರ ಭಾವನೆಗಳಿಗೆ ಗೌರವ ನೀಡಿ ನಾವು ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಟಿಕೆಟ್ ಖರೀದಿಸಿದವರಿಗೆ ಹಣ ಮರುಪಾವತಿ ಪ್ರಕ್ರಿಯೆ ಆರಂಭಿಸಲಾಗಿದೆ. ಸನ್ನಿ ಲಿಯೋನ್ ಕೇವಲ ಡಿಜೆ ಆಗಿ ಬರುತ್ತಿದ್ದರು, ಆದರೆ ತಪ್ಪು ಮಾಹಿತಿ ಹರಡಲಾಗಿತ್ತು. ಅವರು ಭಾರತದಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಇಲ್ಲಿ ಮಾತ್ರ ವಿರೋಧವೇಕೆ?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.






