ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಪ್ರದೇಶದಲ್ಲಿರುವ ಟಿಎಚ್‌ಡಿಸಿ (THDC) ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ಮಂಗಳವಾರ ತಡರಾತ್ರಿ ಭಾರಿ ಅನಾಹುತ ಸಂಭವಿಸಿದೆ. ನಿರ್ಮಾಣ ಹಂತದ ಸುರಂಗದೊಳಗೆ ಎರಡು ಲೋಕೋ ರೈಲುಗಳು (ನಿರ್ಮಾಣ ಸಾಮಗ್ರಿ ಸಾಗಿಸುವ ರೈಲು) ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 65 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಸುಮಾರು 4.5 ಕಿ.ಮೀ ಉದ್ದದ ಸುರಂಗದೊಳಗೆ ರಾತ್ರಿ 8.30ರ ಸುಮಾರಿಗೆ ಈ ಅವಘಡ ನಡೆದಿದೆ. ಶಿಫ್ಟ್ ಬದಲಾವಣೆ ಸಮಯದಲ್ಲಿ ಕಾರ್ಮಿಕರು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಚಲಿಸುವ ರೈಲೊಂದು, ಅದೇ ಹಳಿಯಲ್ಲಿ ನಿಂತಿದ್ದ ಮತ್ತೊಂದು ರೈಲಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಘಟನೆಯ ಸಮಯದಲ್ಲಿ ಎರಡೂ ರೈಲುಗಳಲ್ಲಿ ಒಟ್ಟು 108 ಕಾರ್ಮಿಕರಿದ್ದರು. ಡಿಕ್ಕಿಯ ರಭಸಕ್ಕೆ ಎರಡು ಬೋಗಿಗಳು ಹಳಿ ತಪ್ಪಿದ್ದು, ಸುರಂಗದೊಳಗೆ ಕೆಲಕಾಲ ಭಾರಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಗೌರವ್ ಕುಮಾರ್ ಮತ್ತು ಎಸ್ಪಿ ಸುರ್ಜೀತ್ ಸಿಂಗ್ ಪನ್ವಾರ್ ಗೋಪೇಶ್ವರದ ಜಿಲ್ಲಾ ಆಸ್ಪತ್ರೆಗೆ ದೌಡಾಯಿಸಿ, ಚಿಕಿತ್ಸೆ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಮತ್ತು ಎಲ್ಲಾ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲಕನಂದಾ ನದಿಯ ಮೇಲೆ ನಿರ್ಮಿಸಲಾಗುತ್ತಿರುವ 444 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳುವ ಹಂತದಲ್ಲಿದೆ.
ಸುರಂಗದೊಳಗೆ ಒಂದೇ ಹಳಿಯ ಮೇಲೆ ಎರಡು ರೈಲುಗಳು ಹೇಗೆ ಬಂದವು ಮತ್ತು ಸುರಕ್ಷತಾ ಲೋಪವಾಗಿದೆಯೇ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.






