ಕಾರವಾರ: ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿಸುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಕಾರವಾರದಿಂದ ಅಂಕೋಲಾ ಮಾರ್ಗವಾಗಿ ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿಯೊಬ್ಬಳು ನಿದ್ದೆ ಮಾಡುತ್ತಿದ್ದ ವೇಳೆ ಪಕ್ಕದಲ್ಲೇ ಕುಳಿತಿದ್ದ ಯುವಕ ಅನುಚಿತವಾಗಿ ವರ್ತಿಸಿದ್ದಾನೆ.
ಘಟನೆಯ ವಿವರ :
ಯುವತಿ ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದಾಗ, ಪಕ್ಕದ ಸೀಟಿನಲ್ಲಿದ್ದ ಯುವಕ ಆಕೆಯ ಎದೆಯ ಮೇಲೆ ಕೈ ಇಟ್ಟು ಅನುಚಿತವಾಗಿ ವರ್ತಿಸಿದ್ದಾನೆ. ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ ಯುವಕನ ಕೈ ಆಕೆಯ ಮೇಲಿರುವುದು ಕಂಡುಬಂದಿದೆ.
ಕೂಡಲೇ ಎದೆಗುಂದದ ಯುವತಿ, ಆರೋಪಿಯ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ (Video) ಮಾಡಿದ್ದಾಳೆ. ಅಲ್ಲದೆ, ಆತನಿಗೆ ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡು ತನ್ನ ಆಕ್ರೋಶ ಹೊರಹಾಕಿದ್ದಾಳೆ.
ಯುವತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡುವ ಮೂಲಕ ಶಿಕ್ಷೆಗೆ ಮನವಿ ಮಾಡಿದ್ದಾಳೆ. “ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು” ಎಂದು ಇತರ ಮಹಿಳೆಯರಿಗೂ ಧೈರ್ಯದ ಸಂದೇಶ ನೀಡಿದ್ದಾಳೆ.
ಈ ವಿಡಿಯೋ ವೈರಲ್ (Video Viral) ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್. (SP Deepan MN) ಈ ಬಗ್ಗೆ ಮಾಧ್ಯಮದವರ ಮುಂದೆ ಮಾತನಾಡಿದ ಅವರು, ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ತಕ್ಷಣವೇ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೂ ಆ ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಯುವತಿ ಠಾಣೆಗೆ ಬಂದು ದೂರು ನೀಡಿದರೆ ಕಾನೂನು ಕ್ರಮ ಜರುಗಿಸಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.






