ಬಳ್ಳಾರಿ: ಬಳ್ಳಾರಿಯಲ್ಲಿ ಮೊದಲಿನಿಂದಲೂ ರಾಕ್ಷಸರ ಅಟ್ಟಹಾಸ ನಡೆಯುತ್ತಿದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಕೆಡಿಸಲು ಈ ರಾಕ್ಷಸರು ಸಂಚು ರೂಪಿಸುತ್ತಿದ್ದಾರೆ. ಜನಾರ್ದನ್ ರೆಡ್ಡಿ (Janardhana Reddy) ಒಬ್ಬ ನೀಚ ಎಂದು ಶಾಸಕ ನಾರಾ ಭರತ್ ರೆಡ್ಡಿ (MLA Nara Bharath Reddy) ಅವರು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ ಬೆನ್ನಲ್ಲೇ, ಶಾಸಕ ನಾರಾ ಭರತ್ ರೆಡ್ಡಿ (MLA Nara Bharath Reddy) ಅವರು ಜನಾರ್ದನ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಕಾರ್ಯಕರ್ತ, ನನ್ನ ತಮ್ಮನಂತಿದ್ದ ರಾಜಶೇಖರ್ ಸಾವಿನಿಂದ ನಾವು ದುಃಖದಲ್ಲಿದ್ದೇವೆ, ಆದರೆ ಯಾವುದಕ್ಕೂ ಕುಗ್ಗುವುದಿಲ್ಲ. ನಾವು ಬ್ಯಾನರ್ ಹಾಕಿದ್ದು ಅವರ ಮನೆ ಮುಂದಲ್ಲ, ಸಾರ್ವಜನಿಕ ರಸ್ತೆಯಲ್ಲಿ. ಅಕ್ರಮ ಗಣಿಗಾರಿಕೆ ಇಶ್ಯೂ ಡೈವರ್ಟ್ ಮಾಡಲು ರೆಡ್ಡಿ ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಎಷ್ಟೇ ಅಡೆತಡೆಗಳು ಬಂದರೂ ನಾಳೆ ನಡೆಯಲಿರುವ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಿಲ್ಲುವುದಿಲ್ಲ. ನಮ್ಮ ಅಜ್ಜನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುತ್ತೇವೆ . ರಾಜ್ಯ ನಾಯಕರು, ಡಿಕೆ ಶಿವಕುಮಾರ್ ಅವರು ನನ್ನ ಜೊತೆ ಮಾತನಾಡಿದ್ದಾರೆ. ನಾವೆಲ್ಲಾ ನಿಮ್ಮ ಜೊತೆ ಇದ್ದೇವೆ, ಧೈರ್ಯವಾಗಿರಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಸದ್ಯ ಮೂರು ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಳ್ಳಾರಿ ಸದ್ಯ ಶಾಂತಿಯುತವಾಗಿದೆ ಎಂದು ಶಾಸಕರು ಇದೇ ವೇಳೆ ತಿಳಿಸಿದರು.






