ಚಿಕ್ಕಮಗಳೂರು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಹಾಗೂ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. “ಈ ಗಲಾಟೆಗೆ ಬ್ಯಾನರ್ ಕೇವಲ ನೆಪವಷ್ಟೇ, ಇದರ ಹಿಂದೆ ಬೇರೆಯದೇ ದುರುದ್ದೇಶ ಮತ್ತು ಸಾಧ್ಯತೆಗಳಿವೆ” ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಘಟನೆಯ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. “ತನಿಖೆಯಲ್ಲಿ ದ್ವೇಷ ಅಥವಾ ಪೂರ್ವಾಗ್ರಹ ಇರಬಾರದು. ಗುಂಡು ಹಾರಿಸಿದವರು ಯಾರು? ಕೊಲೆಗೆ ನಿಜವಾದ ಕಾರಣೀಕರ್ತರು ಯಾರು ಎಂಬುದು ಹೊರಬರಬೇಕು. ದುರುದ್ದೇಶದಿಂದ ಮೊಕದ್ದಮೆ ಹೂಡುವುದು ಸರಿಯಲ್ಲ. ಒಂದು ವೇಳೆ ಅನುಮತಿ ಪಡೆದು ಬ್ಯಾನರ್ ಹಾಕಿದ್ದರೆ ಅದನ್ನು ತೆರವುಗೊಳಿಸಿದ್ದು ತಪ್ಪು. ಅನುಮತಿ ಇಲ್ಲದಿದ್ದರೆ ದೂರು ನೀಡಬಹುದಿತ್ತು, ಅದನ್ನು ಬಿಟ್ಟು ಸಂಘರ್ಷಕ್ಕೆ ಇಳಿದಿದ್ದು ದುರಾದೃಷ್ಟಕರ” ಎಂದು ಹೇಳಿದರು.
ರೆಡ್ಡಿ ಹತ್ಯೆಗೆ ಸ್ಕೆಚ್ ಹಾಕಿದ್ರಾ?: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನೆ ಬಳಿ ಗುಂಪು ಹೋಗಿ ಬಲಾಬಲ ಪ್ರದರ್ಶನ ಮಾಡಿದ್ದನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ಸಿ.ಟಿ. ರವಿ ಪ್ರಶ್ನಿಸಿದರು. “ನನ್ನ ಹತ್ಯೆ ಮಾಡಲು ಬಂದಿದ್ದಾರೆ ಎಂಬ ಜನಾರ್ದನ ರೆಡ್ಡಿಯವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಇದೆಲ್ಲವನ್ನೂ ನೋಡಿದಾಗ ಫ್ಲೆಕ್ಸ್ ವಿಚಾರ ಕೇವಲ ನೆಪ ಎನಿಸುತ್ತಿದೆ. ಇದರ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರವಿರುವ ಸಾಧ್ಯತೆ ಇದೆ” ಎಂದು ಅವರು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಇದೇ ವೇಳೆ ಕಾಂಗ್ರೆಸ್ ನಿಲುವಿನ ಬಗ್ಗೆ ಟೀಕಿಸಿದ ಅವರು, “ವಾಲ್ಮೀಕಿ ಜಯಂತಿಯನ್ನು ಆಚರಿಸಲು ಪ್ರಾರಂಭಿಸಿದ್ದೇ ಬಿಜೆಪಿ ಸರ್ಕಾರ. ಹಿಂದೆ ರಾಮಸೇತು ವಿಚಾರದಲ್ಲಿ ರಾಮ ಎನ್ನುವುದು ಇತಿಹಾಸವಲ್ಲ, ಕೇವಲ ಕಥೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್ ಹೇಳಿತ್ತು. ರಾಮನ ಅಸ್ತಿತ್ವವನ್ನೇ ನಿರಾಕರಿಸುವ ಮೂಲಕ ಪರೋಕ್ಷವಾಗಿ ವಾಲ್ಮೀಕಿಯ ಅಸ್ತಿತ್ವವನ್ನೂ ಕಾಂಗ್ರೆಸ್ ನಿರಾಕರಿಸುವ ಕೆಲಸ ಮಾಡಿತ್ತು” ಎಂದು ಕಿಡಿಕಾರಿದರು.






