ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಉಂಟಾದ ಅತಿಸಾರ ಭೇದಿ (Diarrhoea) ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಈ ದುರಂತಕ್ಕೆ ಕಲುಷಿತ ಕುಡಿಯುವ ನೀರೇ ನೇರ ಕಾರಣ ಎಂದು ಪ್ರಯೋಗಾಲಯದ ಪರೀಕ್ಷಾ ವರದಿ ದೃಢಪಡಿಸಿದೆ. ಕಲುಷಿತ ನೀರು ಸೇವನೆಯಿಂದ ಈಗಾಗಲೇ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 1,400ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಿ ಎಡವಟ್ಟಾಯ್ತು?: ಇಂದೋರ್‌ನ ಭಗೀರಥಪುರ (Bhagirathpura) ಪ್ರದೇಶದಲ್ಲಿ ಈ ಸೋಂಕು ಮೊದಲು ಕಾಣಿಸಿಕೊಂಡಿದೆ. ನಗರದ ಮುಖ್ಯ ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಉಂಟಾದ ಸೋರಿಕೆಯೇ ಇದಕ್ಕೆ ಕಾರಣ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ. ಮಾಧವ್ ಪ್ರಸಾದ್ ಹಸಾನಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಔಟ್‌ಪೋಸ್ಟ್ ಬಳಿ ಇರುವ ಕುಡಿಯುವ ನೀರಿನ ಪೈಪ್‌ಲೈನ್ ಮೇಲೆ ಶೌಚಾಲಯವೊಂದನ್ನು ನಿರ್ಮಿಸಲಾಗಿತ್ತು. ಅಲ್ಲಿಂದ ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಗೆ ಸೇರಿಕೊಂಡ ಪರಿಣಾಮ ಇಡೀ ಪ್ರದೇಶಕ್ಕೆ ಕಲುಷಿತ ನೀರು ಸರಬರಾಜಾಗಿದೆ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ನೀರು ಕುದಿಸಿ ಕುಡಿಯಲು ಸೂಚನೆ: ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಆಡಳಿತ, ಭಗೀರಥಪುರದ ಸಂಪೂರ್ಣ ನೀರು ಸರಬರಾಜು ಜಾಲವನ್ನು ತಪಾಸಣೆ ನಡೆಸುತ್ತಿದೆ. ಗುರುವಾರ ಮನೆಗಳಿಗೆ ಶುದ್ಧ ನೀರು ಪೂರೈಕೆ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಕಾಯಿಸಿ, ಆರಿಸಿ ಕುಡಿಯುವಂತೆ ನಿವಾಸಿಗಳಿಗೆ ಅಪರ ಮುಖ್ಯ ಕಾರ್ಯದರ್ಶಿ ಸಂಜಯ್ ದುಬೆ ಸೂಚನೆ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ಅವಘಡಗಳು ನಡೆಯದಂತೆ ತಡೆಯಲು ಮಧ್ಯಪ್ರದೇಶದಾದ್ಯಂತ ಹೊಸ ಕಾರ್ಯಾಚರಣೆಯ ಮಾನದಂಡಗಳನ್ನು (SOP) ಜಾರಿಗೆ ತರುವುದಾಗಿ ಅವರು ತಿಳಿಸಿದ್ದಾರೆ.
ಐಸಿಯುನಲ್ಲಿ 32 ಮಂದಿ: ಆರೋಗ್ಯ ಇಲಾಖೆ ಗುರುವಾರ 1,714 ಮನೆಗಳಲ್ಲಿ ಸಮೀಕ್ಷೆ ನಡೆಸಿ, 8,571 ಜನರನ್ನು ತಪಾಸಣೆಗೊಳಪಡಿಸಿದೆ. ಕಳೆದ ಎಂಟು ದಿನಗಳಲ್ಲಿ 272 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ 201 ರೋಗಿಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 32 ಜನರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಮುಂದುವರಿಸಲಾಗಿದೆ.






