ಮಧ್ಯಪ್ರದೇಶ: ಪ್ರವಾಸಿಗರು ಪ್ರೀತಿಯಿಂದ ಹಾಕಿದ ಆಹಾರವೇ ಮುಳುವಾಗಿ, ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ನರ್ಮದಾ ನದಿ ತೀರದಲ್ಲಿ ಕನಿಷ್ಠ 200ಕ್ಕೂ ಹೆಚ್ಚು ಗಿಳಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಹಾರ ವಿಷವಾಗಿ (Food Poisoning) ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ಖಚಿತಪಡಿಸಿದ್ದಾರೆ.
ಬಡ್ವಾ (Badwah) ಪ್ರದೇಶದ ಜಲಸೇತುವೆಯ ಬಳಿ ಕಳೆದ ನಾಲ್ಕು ದಿನಗಳಿಂದ ಸಾಲು ಸಾಲು ಗಿಳಿಗಳ ಮೃತದೇಹಗಳು ಪತ್ತೆಯಾಗುತ್ತಿವೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಗಿಳಿಗಳು ಜೀವಂತವಾಗಿದ್ದರೂ, ಆಹಾರದ ವಿಷದ ತೀವ್ರತೆ ಹೆಚ್ಚಿದ್ದರಿಂದ ಅವುಗಳು ಕೆಲವೇ ಕ್ಷಣಗಳಲ್ಲಿ ಪ್ರಾಣಬಿಟ್ಟಿವೆ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ತಿಳಿಸಿದ್ದಾರೆ.
ಸಾಮೂಹಿಕವಾಗಿ ಪಕ್ಷಿಗಳು ಸತ್ತಿರುವುದನ್ನು ಕಂಡು ಸ್ಥಳೀಯರಲ್ಲಿ ಹಕ್ಕಿ ಜ್ವರದ (Bird Flu) ಭೀತಿ ಆವರಿಸಿತ್ತು. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಮನೀಶಾ ಚೌಹಾಣ್ ಅವರು ಹಕ್ಕಿ ಜ್ವರದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. “ಪಕ್ಷಿಗಳ ಜೀರ್ಣಾಂಗ ವ್ಯವಸ್ಥೆಗೆ ಹೊಂದಿಕೆಯಾಗದ ಆಹಾರವನ್ನು ಜನರು ಅರಿವಿಲ್ಲದೆ ನೀಡುತ್ತಿದ್ದಾರೆ. ಮೃತ ಗಿಳಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಬೇಯಿಸಿದ ಆಹಾರ, ಉಳಿದ ಆಹಾರ ಅಥವಾ ಕೀಟನಾಶಕ ಸಿಂಪಡಿಸಿದ ಹೊಲದ ಧಾನ್ಯಗಳನ್ನು ತಿಂದಿದ್ದೇ ಈ ದುರಂತಕ್ಕೆ ಕಾರಣ” ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಯು ಸೇತುವೆಯ ಬಳಿ ಪಕ್ಷಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ ಮತ್ತು ಕಟ್ಟುನಿಟ್ಟಿನ ಜಾರಿಗೆ ಸಿಬ್ಬಂದಿಯನ್ನು ನಿಯೋಜಿಸಿದೆ. ಹೆಚ್ಚಿನ ಪರೀಕ್ಷೆಗಾಗಿ ಪಕ್ಷಿಗಳ ವಿಸೆರಾ (Viscera) ಮಾದರಿಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ.






