ಮಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆ ಮಂಗಳೂರು ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಆಘಾತಕಾರಿ ಮಾಹಿತಿಯೊಂದು ಲಭ್ಯವಾಗಿದೆ. ನಗರವನ್ನು ‘ಮಾದಕ ವ್ಯಸನ ಮುಕ್ತ’ವಾಗಿಸುವ ನಿಟ್ಟಿನಲ್ಲಿ ಪೊಲೀಸರು ಹೊಸ ವರ್ಷಾಚರಣೆಯ ರಾತ್ರಿ ನಡೆಸಿದ ತಪಾಸಣೆಯಲ್ಲಿ ಬರೋಬ್ಬರಿ 52 ಮಂದಿ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ನಗರದಾದ್ಯಂತ ಗುರುವಾರ ರಾತ್ರಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ, ಅನುಮಾನಾಸ್ಪದವಾಗಿ ಕಂಡುಬಂದ ಸುಮಾರು 1000ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ 52 ಜನರಲ್ಲಿ 25 ಮಂದಿ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಸ್ಥಳೀಯರಾದರೆ, ಉಳಿದ 23 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ. ಇನ್ನುಳಿದ 27 ಮಂದಿಯಲ್ಲಿ 17 ಕಾರ್ಮಿಕರು ಹಾಗೂ ವಿವಿಧ ವೃತ್ತಿಯಲ್ಲಿರುವ 10 ಮಂದಿ ಸೇರಿದ್ದಾರೆ.
ಮೂವರು ಪೆಡ್ಲರ್‌ಗಳು ಅಂದರ್: ಕೇವಲ ಸೇವನೆ ಮಾಡಿದವರಲ್ಲದೆ, ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನೂ ಪೊಲೀಸರು ಭೇದಿಸಿದ್ದಾರೆ. ಮಂಗಳವಾರ 50 ಗ್ರಾಂ ಎಂಡಿಎಂಎ (MDMA) ಜೊತೆ ಒಬ್ಬ ಯುವಕನನ್ನು ಹಾಗೂ ಬುಧವಾರ 200 ಗ್ರಾಂ ಎಂಡಿಎಂಎ ಹೊಂದಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ.
ಈ ಕಾರ್ಯಾಚರಣೆಯಿಂದಾಗಿ ಡ್ರಗ್ಸ್ ಜಾಲದ ಗ್ರಾಹಕರು ಮತ್ತು ಮಾರಾಟಗಾರರ ಬಗ್ಗೆ ಮಹತ್ವದ ಸುಳಿವು ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಈ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು ಇದು ನೆರವಾಗಲಿದ್ದು, ‘ಮಾದಕ ಮುಕ್ತ ಮಂಗಳೂರು’ ಅಭಿಯಾನಕ್ಕೆ ಇದೊಂದು ದೊಡ್ಡ ಯಶಸ್ಸು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.






