ಮಂಡ್ಯ: ಫೆಬ್ರವರಿ 23ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸುಕ್ಷೇತ್ರ ಆದಿಚುಂಚನಗಿರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಮಿಸಲಿದ್ದಾರೆ. ಶ್ರೀಕ್ಷೇತ್ರದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ಒಪ್ಪಿಗೆ ನೀಡಿದ್ದು, ಜಿಲ್ಲೆಯಲ್ಲಿ ಬಿಗಿ ಭದ್ರತೆ ಮತ್ತು ಸಿದ್ಧತೆಗಳು ಆರಂಭವಾಗಲಿವೆ.
ಪ್ರವಾಸದ ಪ್ರಮುಖ ಕಾರ್ಯಕ್ರಮಗಳು:
ಲಿಂಗೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ (Balagangadharanatha Swamiji) ಅವರ ಗದ್ದುಗೆಯನ್ನು ಪ್ರಧಾನಿ ಮೋದಿ ಅಂದು ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಸ್ತುತ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರ ವಾರ್ಷಿಕ ಪಟ್ಟಾಭಿಷೇಕ ವರ್ಧಂತಿ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಪಾಲ್ಗೊಳ್ಳಲಿದ್ದಾರೆ. ಹಾಗೂ ಶ್ರೀಕ್ಷೇತ್ರದ ಇತಿಹಾಸ ಮತ್ತು ಧಾರ್ಮಿಕ ಪರಂಪರೆಯ ಕುರಿತು ಮೋದಿ ಅವರು ಸಾರ್ವಜನಿಕವಾಗಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿಯ ಬಗ್ಗೆ ಆದಿಚುಂಚನಗಿರಿ ಶ್ರೀಗಳು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ದಿನಾಂಕ ಮತ್ತು ಸಮಯದ ಸಂಪೂರ್ಣ ಮಾಹಿತಿಯನ್ನು ಘೋಷಿಸಲಿದ್ದಾರೆ. ಮಂಡ್ಯ ಜಿಲ್ಲಾಡಳಿತ ಕೂಡ ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.






