ಬಳ್ಳಾರಿ: ನಗರದಲ್ಲಿ ಬ್ಯಾನರ್ (Banner) ಅಳವಡಿಸುವ ವಿಚಾರವಾಗಿ ಕೆಆರ್‌ಪಿಪಿ (KRPP) ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ನಡೆದ ಮಾರಾಮಾರಿಯಲ್ಲಿ ಗುಂಡೇಟು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ. ಈ ಘಟನೆ ಬಳ್ಳಾರಿಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಜನಾರ್ದನ್ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವಿನ ಸಂಘರ್ಷ ತಾರಕಕ್ಕೇರಿದೆ.
ಘಟನೆಯ ಹಿನ್ನೆಲೆ :
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ನಿಮಿತ್ತ ಶಾಸಕ ನಾರಾ ಭರತ್ ರೆಡ್ಡಿ ಫೋಟೋ ಇರುವ ಬ್ಯಾನರ್ ಅನ್ನು ಜನಾರ್ದನ್ ರೆಡ್ಡಿ (Janardhana Reddy) ಅವರ ಮನೆಯ ಮುಂಭಾಗ ಅಳವಡಿಸಲಾಗಿತ್ತು. ಇದನ್ನು ರೆಡ್ಡಿ ಅವರ ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದಾಗ ವಿವಾದ ಆರಂಭವಾಗಿದೆ. ಜನಾರ್ದನ್ ರೆಡ್ಡಿ ಅವರ ಸೂಚನೆಯಂತೆ ಸ್ಥಳಕ್ಕೆ ಬಂದ ಶ್ರೀರಾಮುಲು ಮತ್ತು ಬೆಂಬಲಿಗರು ಬ್ಯಾನರ್ ಹರಿದು ಹಾಕಿದ್ದಾರೆ. ಇದು ಉಭಯ ಬಣಗಳ ನಡುವೆ ಕೈ ಕೈ ಮಿಲಾಯಿಸಲು ಕಾರಣವಾಯಿತು.
ಗಲಾಟೆ ವಿಕೋಪಕ್ಕೆ ಹೋದಾಗ ಸತೀಶ್ ರೆಡ್ಡಿ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಲ್ಲು ತೂರಾಟವೂ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಸಂಘರ್ಷದ ನಡುವೆ ರಾಜಶೇಖರ್ (Rajashekhar) ಎಂಬುವವರ ಬೆನ್ನಿನ ಭಾಗಕ್ಕೆ ಗುಂಡು ತಗುಲಿ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ತಾಯಿ ಕಣ್ಣೀರು:
ಮೃತ ರಾಜಶೇಖರ್ ಕುಟುಂಬಕ್ಕೆ ಆಧಾರವಾಗಿದ್ದರು. “ನನ್ನ ಮಗ ಕಾಂಗ್ರೆಸ್‌ನಲ್ಲಿ ಓಡಾಡುತ್ತಿದ್ದ, ನಾವು ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದೆವು. ಅಪಘಾತವಾಗಿದೆ ಎಂದು ಕರೆದುಕೊಂಡು ಬಂದರು, ಇಲ್ಲಿ ನೋಡಿದರೆ ಹೆಣವಾಗಿದೆ” ಎಂದು ತಾಯಿ ತುಳಸಿ ವಿಮ್ಸ್ ಆಸ್ಪತ್ರೆಯ ಮುಂದೆ ಕಣ್ಣೀರು ಹಾಕಿದ್ದಾರೆ.
ಒಂದು ಕಡೆ ನನ್ನ ಹತ್ಯೆಗೆ ಸಂಚು ನಡೆದಿದೆ ಎಂದು ಜನಾರ್ದನ್ ರೆಡ್ಡಿ ಆರೋಪಿಸಿದ್ದಾರೆ. ಹಾಗೆ ಕಾರ್ಯಕರ್ತನ ಸಾವಿಗೆ ರೆಡ್ಡಿ ಅವರೇ ಕಾರಣ ಎಂದು ಆರೋಪಿಸಿ, ಅವರ ಬಂಧನಕ್ಕೆ ಆಗ್ರಹಿಸಿ ಭರತ್ ರೆಡ್ಡಿ ಪ್ರತಿಭಟನೆ ನಡೆಸಿದರು.






